ಕಾರಂತ ಥೀಮ್ ಪಾರ್ಕ್ : ವಾರಾಂತ್ಯ ತರಗತಿ ಪುನಾರಂಭ
ಕೋಟ : ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ|| ಶಿವರಾಮ ಕಾರಂತ ಅನೌಪಚಾರಿಕ ಕೇಂದ್ರ (ರಿ) ಕೋಟ ಇದರ ಅಡಿಯಲ್ಲಿ ನಡೆಯುವ ಚಿತ್ರಕಲಾ, ಯಕ್ಷಗಾನ ನೃತ್ಯ ತರಗತಿಯ ಶೈಕ್ಷಣಿಕ ವರ್ಷದ ಆರಂಭೋತ್ಸವನ್ನು ಡಾ|| ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಶ್ರೀ ಸುಬ್ರಾಯ್ ಆಚಾರ್ಯ ಉದ್ಘಾಟಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ತರಗತಿ ಉಪಯುಕ್ತವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಇಂತಹ ತರಗತಿಗಳಲ್ಲಿ ಭಾಗವಹಿಸುವುದಕ್ಕೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ, ಕ್ರಿಯೇಟಿವ್ ಆರ್ಟ್ನ ಚಿತ್ರಕಲಾ ಶಿಕ್ಷಕ ಶ್ರೀ ಗಿರೀಶ್ ಆಚಾರ್ಯ ವಕ್ವಾಡಿ, ಯಕ್ಷಗಾನ ನೃತ್ಯ ಶಿಕ್ಷಕಿ ಕುಮಾರಿ ಸಂಗೀತ ಕಾರ್ತಟ್ಟು ಉಪಸ್ಥಿತರಿದ್ದರು.
ಸಂಗೀತ ತರಗತಿ ಉದ್ಘಾಟನೆ
ಸಂಗೀತ ತರಗತಿಯನ್ನು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಶ್ರೀಮತಿ ಸುಶೀಲ ಸೋಮಶೇಖರ್ ಉದ್ಘಾಟಿಸಿ ಮಕ್ಕಳು ಶಾಲಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತಮ್ಮನ್ನು ತೊಡಗಿಸಿಕೊಂಡಾಗ ಅವರಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ ವಾರಾಂತ್ಯದಲ್ಲಿ ಮಕ್ಕಳಿಗೆ ಹಲವು ತರಗತಿಗಳು ನಡೆಯುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಶ್ರೀಮತಿ ಭಾಗೇಶ್ವರಿ ಮಯ್ಯ, ಪೋಷಕರು ಉಪಸ್ಥಿತರಿದ್ದರು.