ಶ್ರೀಮತಿ ಕವಿತಾ ಮಿಶ್ರ ಅವರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ


ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಡಾ|| ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟದ ಸಹಭಾಗಿತ್ವದಲ್ಲಿ ಕಳೆದ ಹದಿನಾಲ್ಕು ವರುಷಗಳಿಂದ ಕಾರಂತರ ವಿವಿಧ ಆಸಕ್ತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ|| ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ.
ಈಗಾಗಲೇ ಶ್ರೀಯುತರಾದ ಶ್ರೀ ವೀರಪ್ಪ ಮೊಯ್ಲಿ, ಶ್ರೀ ವೆಂಕಟಾಚಲ, ಶ್ರೀ ಕೆ.ರಾಮಕೃಷ್ಣ ಹಂದೆ, ಶ್ರೀ ರವಿ ಬೆಳಗೆರೆ, ಶ್ರೀ ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ, ಶ್ರೀ ಮೋಹನ ಆಳ್ವ, ಶ್ರೀಮತಿ ಸಾಲು ಮರದ ತಿಮ್ಮಕ್ಕ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಜಯಂತ ಕಾಯ್ಕಿಣಿ, ಶ್ರೀ ಸದಾನಂದ ಸುವರ್ಣ, ಡಾ | ಬಿ. ಎಂ ಹೆಗ್ಡೆ , ಶ್ರೀ ಪ್ರಕಾಶ್ ರೈ, ಶ್ರೀ ಪಡ್ರೆ ಯವರಿಗೆ ಪ್ರದಾನ ಮಾಡಲಾಗಿರುತ್ತದೆ.
2019 ನೇ ಸಾಲಿನಲ್ಲಿ ಕಾರಂತರ ಆಸಕ್ತಿಯ ಕ್ಷೇತ್ರ ಪರಿಸರ ವಿಭಾಗದಿಂದ ಮಣ್ಣಿನ ಮಗಳು ಶ್ರೀಮತಿ ಕವಿತಾ ಮಿಶ್ರ ಅವರನ್ನು ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಅಕ್ಟೋಬರ್ 10ರಂದು ಡಾ|| ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ದಿನ ಡಾ|| ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಇವರಿಗೆ ಪ್ರದಾನ ಮಾಡಲಾಗುತ್ತದೆ.
ಪರಿಸರ ಪ್ರೇಮಿಯಾಗಿ, ಕೃಷಿ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿ ,ಮಿಶ್ರ ಬೆಳೆ-ಅರಣ್ಯ ಕೃಷಿ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ ರೈತ ಮಹಿಳೆ ಶ್ರೀಮತಿ ಕವಿತಾ ಮಿಶ್ರಾ ಅವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಅಕ್ಟೋಬರ್ ಹತ್ತರಿಂದ ಹತ್ತೊಂಬತ್ತರವರೆಗೆ ಹತ್ತು ದಿನಗಳ ಸಾಂಸ್ಕೃತಿಕ- ಸಾಹಿತ್ಯಿಕ ಸುಗ್ಗಿ ‘ಪುನರ್ವಸು-2019’ (ಮಳೆಬಿಲ್ಲಿನ ಕನವರಿಕೆ) ಯನ್ನು ಹಮ್ಮಿಕೊಳ್ಳಲಾಗಿದೆ. ಕಾರಂತರೂರಿನ ಪ್ರತಿಭೆಗಳ ಕಾರಂತ ವಿರಾಸತ್, ಪ್ರತಿಭಾ ನಮನ, ಮಕ್ಕಳ ಹಬ್ಬ, ಚಲನಚಿತ್ರ ಪ್ರದರ್ಶನ, ನಾಟಕ ಪ್ರದರ್ಶನ,ಜಾದು ಜಾತ್ರೆ, ಆನ್ ಲೈನ್ ಕ್ವಿಜ್, ಮೊದಲಾದ ಕಾರ್ಯಕ್ರಮಗಳನ್ನು ಡಾ|| ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಆನಂದ ಸಿ. ಕುಂದರ್ , ಕಾರ್ಯಾಧ್ಯಕ್ಷರು ಡಾ. ಕಾರಂತ ಪ್ರತಿಷ್ಠಾನ (ರಿ.) ಕೋಟ, ಶ್ರೀ ರಘು ತಿಂಗಳಾಯ, ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟತಟ್ಟು, ಶ್ರೀ ಯು. ಎಸ್. ಶೆಣೈ ಆಯ್ಕೆ ಸಮಿತಿಯ ಸದಸ್ಯರು, ಶ್ರೀ ಸುಬ್ರಾಯ ಆಚಾರ್ಯ, ಟ್ರಸ್ಟಿಗಳು ಕಾರಂತ ಪ್ರತಿಷ್ಠಾನ (ರಿ.) ಕೋಟ, ಶ್ರೀಮತಿ ಶೈಲಾ .ಎಸ್. ಪೂಜಾರಿ ಪಿ.ಡಿ.ಓ ಕೋಟತಟ್ಟು ಗ್ರಾಮ ಪಂಚಾಯತ್,ಶ್ರೀ ಪ್ರಶಾಂತ ,ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್ ಕೋಟ ,ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

