ಕಾರಂತ ಥೀಮ್ ಪಾರ್ಕ್ ನಲ್ಲಿ ನವೆಂಬರ್ 14 ರಂದು ಮಕ್ಕಳ ಚಿತ್ರಸಂತೆ
ಕೋಟ : ದಿನ ನಿತ್ಯ ಬಳಕೆಯ ಸಾಮಗ್ರಿಗಳ ಕೊಳ್ಳುವ ಮಾರುವ ಸಂತೆ ನಮ್ಮ ಪರಿಸರದಲ್ಲಿ ನೋಡುತ್ತಾ ಇರುತ್ತೇವೆ. ಆದರೆ ಮಕ್ಕಳಲ್ಲಿನ ವಿಶೇಷ ಪ್ರತಿಭೆ ಅನಾವರಣಕ್ಕೆ ಪೂರಕವಾಗುವಂತೆ ಕೊಳ್ಳುವ ಮಾರುವ ವಿನೂತನ ಸಂತೆ ಚಿತ್ರ ಸಂತೆ ಕಾರ್ಯಕ್ರಮ ಆಯೋಜನೆಗೆ ಸಿದ್ದವಾಗುತ್ತಿದೆ. ಮಕ್ಕಳ ಕುಂಚದಲ್ಲಿ ಮೂಡಿ ಬಂದ ಕಲಾಕೃತಿ, ಪೈಟಿಂಗ್, ಪೇಪರ್ನಲ್ಲಿ ಮಾಡಬಹುದಾದ ವಿಭಿನ್ನ ಪ್ರಯೋಗಗಳ ವಸ್ತು ಪ್ರದರ್ಶನ ಹೀಗೆ ಹತ್ತು ಹಲವುಗಳು ಮಕ್ಕಳ ಚಿತ್ರ ಸಂತೆಯಲ್ಲಿ ನಿಮಗೆ ಕಾಣ ಸಿಗುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶ ಹಾಗೂ ಮಕ್ಕಳ ಕ್ರಿಯಾತ್ಮಕ ಚಟುವಟಿಕೆಯನ್ನು ಸಮಾಜಕ್ಕೆ ತೋರ್ಪಡಿಸುವ ನಿಟ್ಟಿನಲ್ಲಿ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ , ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಚಿತ್ರಸಂತೆ ಎನ್ನುವ ವಿಶೇಷ ಪರಿಕಲ್ಪನೆಯ ಕಾರ್ಯಕ್ರಮವನ್ನು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನವೆಂಬರ್ 14 ರಂದು ಆಯೋಜಿಸಲಾಗಿದೆ.
ಮಕ್ಕಳ ಕ್ರಿಯಾಶೀಲ ಚಟುವಟಿಕೆಗೆ ಸಾಕ್ಷಿಯಾಗಲಿದೆ ಚಿತ್ರಸಂತೆ
ಕೋಟದಲ್ಲಿ ಪ್ರಥಮ ಬಾರಿಗೆ ಎಂಬಂತೆ ಜಿಲ್ಲೆಯ ಮೂಲೆ ಮೂಲೆಯಿಂದ ಸುಮಾರು 70 ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿದ್ದು ಚಿತ್ರವನ್ನು ಬಿಡಿಸಿ ವಿವರಣೆ ನೀಡುವುದಲ್ಲದೇ ಮಾರಾಟ ಕೂಡ ಮಾಡುತ್ತಾರೆ. ಅಲ್ಲದೇ ವಿಶೇಷ ಆಕರ್ಷಣೆಯಾಗಿ ಚಿತ್ರಕಲಾ ಪ್ರದರ್ಶನ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಮೆಹಂದಿ ಆರ್ಟ್, ಟ್ಯಾಟೂ ಆರ್ಟ್, ಕ್ಯಾರಿಕೇಚರ್ ಆರ್ಟ್(ವ್ಯಂಗ್ಯ ಚಿತ್ರ) ಮತ್ತು ಸೆಲ್ಪಿ ವಿಡಿಯೋ, ಸುಮಾರು ನಾಲ್ಕು ದಶಕಗಳ ಕಾಲ ಅಂಚೆ ಚೀಟಿ ಸಂಗ್ರಹ ಮಾಡುತ್ತಿರುವ ಶ್ರೀಲಕ್ಷ್ಮೀ ನಾರಾಯಣ ನಾಯಕ್ ಕಲ್ಯಾಣಪುರ ಇವರ ವಿಶೇಷ ಅಂಚೆ ಚೀಟಿಗಳ ಪ್ರದರ್ಶನ ಹಾಗೂ ಮುಂತಾದ ಪ್ರದರ್ಶನಗಳ ವ್ಯವಸ್ಥೆ ಮಾಡಲಾಗಿದ್ದು.ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ಸಂಚಾಲಕ ಶ್ರೀ ಗಿರೀಶ್ ವಕ್ವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.