ಸಂಗೀತ ಲೋಕಕ್ಕೆ ಪಿ.ಕಾಳಿಂಗ ರಾವ್ ಕೊಡುಗೆ ಅಪಾರ-ಕೋಟ ಶ್ರೀನಿವಾಸ ಪೂಜಾರಿ
ದಿ.ಪಿ.ಕಾಳಿಂಗ ರಾವ್ ಸ್ಮಾರಕ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅಭಿಮತ
ಕೋಟ: ಸಂಗೀತ ಲೋಕಕ್ಕೆ ಪಿ. ಕಾಳಿಂಗ ರಾವ್ ಅವರ ಕೊಡುಗೆ ಅಪಾರ,ಅವರ ಬದುಕಿನ ಸಾಧನೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯವಾಗಬೇಕು ಆ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸ್ಮಾರಕ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ಅವರು ಕಾರಂತ ಪ್ರತಿಷ್ಠಾನ (ರಿ) ಕೋಟ,ಕಾರಂತ ಟ್ರಸ್ಟ್(ರಿ) ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ಅವರು ಆಶ್ರಯದಲ್ಲಿ ನಡೆಯುತ್ತಿರುವ ಕ್ರಾಫ್ಟ್ -ಚಿತ್ರಕಲೆ ಕಮ್ಮಟ ಕಿನ್ನರಿ-2019 ಕಾರ್ಯಕ್ರಮ ಸಮಾರೋಪದಲ್ಲಿ ಹಾಗೂ ದಿ.ಪಿ.ಕಾಳಿಂಗ ರಾವ್ ಸ್ಮಾರಕ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ದಿ.ಪಿ ಕಾಳಿಂಗ ರಾವ್ ಸ್ಮಾರಕ ಪುರಸ್ಕಾರವನ್ನು ಸಂಗೀತ ಶಿಕ್ಷಕಿ ಶ್ರೀಮತಿ ಮಾಲಿನಿ ರಮೇಶ್ ಹಾಗೂ ಯುವ ಗಾಯಕ ಶ್ರೀ ಸುರೇಶ್ ಕಾರ್ಕಡ ಅವರಿಗೆ ಕಾರಂತ ಥೀಮ್ ಪಾರ್ಕ್ನಲ್ಲಿ ಹಸ್ತಾಂತರಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಶ್ರೀಮತಿ ಮಾಲಿನಿ ರಮೇಶ್ ಮಾತನಾಡಿ ಕಠಿಣ ಪರಿಶ್ರಮದಿಂದ ನಮ್ಮ ಯಶಸ್ಸು ಸಾಧ್ಯ ,ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವೆ ಎಂದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ರಾಮಚಂದ್ರ ಐತಾಳ್ ,ಕಾರಂತ ಥೀಮ್ ಪಾರ್ಕ್ ಟ್ರಸ್ಟಿ ಸುಬ್ರಾಯ್ ಆಚಾರ್,ಶ್ರೀಮತಿ ಸುಶೀಲಾ ಸೋಮಶೇಖರ್,ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಎಚ್.ಪ್ರಮೋದ್ ಹಂದೆ,ವಾಸು ಪೂಜಾರಿ,ಪಿ.ಡಿಓ ವಿವೇಕ್ ಅಮೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸತೀಶ್ ವಡ್ಡರ್ಸೆ ನಿರೂಪಿಸಿ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿದರು,ಕುಮಾರ್ ಸಾಲಿಗ್ರಾಮ ವಂದಿಸಿದರು