ಕಾರಂತರೂರಿನಲ್ಲಿ ಮೆರುಗು ಹೆಚ್ಚಿಸಿದ ಕಾರಂತೋತ್ಸವ
ಪುನರ್ವಸು-2019(ಮಳೆ ಬಿಲ್ಲಿನ ಕನವರಿಕೆ)



ಕೋಟ:ಕಾರಂತರು ಹುಟ್ಟಿ ಓಡಾಡಿದ ಊರಿನಲ್ಲಿ 10 ದಿನಗಳ ಕಾಲ ಹಬ್ಬದ ವಾತಾವರಣ.ದಿನ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಸಾಂಸ್ಕೃತಿಕ ರುಚಿಯ ಮನಸ್ಸುಗಳಿಗೆ ಸಂಭ್ರಮದ ಕನವರಿಕೆ…ಹೌದು ಇದು ಕಂಡು ಬಂದಿದ್ದು ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ. ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕಾರಂತ ಜನ್ಮ ದಿನೋತ್ಸವದ ಪ್ರಯುಕ್ತ ಕಾರಂತೋತ್ಸವ ಪುನರ್ವಸು-2019(ಮಳೆಬಿಲ್ಲಿನ ಕನವರಿಕೆ) ಕಾರ್ಯಕ್ರಮದಲ್ಲಿ ನಾನಾ ವಿಶೇಷತೆಗಳು ಗಮನ ಸೆಳೆದವು.
ಅಕ್ಟೋಬರ್ 10 ರಿಂದ 19ರ ತನಕ ಕಾರಂತೋತ್ಸವವು ಜರಗಿತು, ಕೃಷಿಯನ್ನೆ ತನ್ನ ಸರ್ವಸ್ವ ಅಂದು ಕೊಂಡು ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ, ಕೃಷಿ ಕೂಡಾ ಒಂದು ಯಶಸ್ವಿ ಉದ್ಯಮವಾಗಬಲ್ಲದು ಎಂದು ತೋರಿಸಿದ ದಿಟ್ಟ ರೈತ ಮಹಿಳಾ ಸಾಧಕಿ ರಾಯಚೂರಿನ ಶ್ರೀಮತಿ ಕವಿತಾ ಮಿಶ್ರ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಹುಶಃ ಸುತ್ತಮುತ್ತಲಿನ ಕೃಷಿಕ ಮನಸ್ಸುಗಳನ್ನು ಹುರಿದುಂಬಿಸಿರಬಹುದು ನಾವು ಕೂಡಾ ಕೃಷಿಯಲ್ಲಿ ಸಾಧನೆ ಮಾಡಬಹುದೆಂಬ ಆತ್ಮ ವಿಶ್ವಾಸ ಇನ್ನೂ ಜಾಸ್ತಿಯಾಗಿರಬಹುದು. ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದು, ಕಾರಂತರು ಹುಟ್ಟಿದ ಮಣ್ಣಿನಲ್ಲಿ ನಿಂತು ಮಾತನಾಡುವುದೇ ನನ್ನ ಭಾಗ್ಯ ಎಂದು ಹೇಳಿದಾಗ,ಕಾರಂತರು ನಮ್ಮ ಊರಿನ ಮುತ್ತು ಎನಿಸಿ ಹೆಮ್ಮೆ ಆಯಿತು.
ಕಾರಂತೋತ್ಸವದಲ್ಲಿ ದಿನ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಾರಾಜಿಸಿದವು. ಮರೆಸುತಾ ದುಗುಡವ ಮನವೇ ಸಂಭ್ರಮಿಸು ಎಂಬಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸುಗಳನ್ನು ಹಗುರಗೊಳಿಸಿದವು.ಹೊಸ ಪರಿಕಲ್ಪನೆಯಲ್ಲಿ ಕಾರಂತರೂರಿನ ಪ್ರತಿಭೆಗಳ ಅಬ್ಬರದ ದಿಬ್ಬಣ ಕಾರಂತ್ ವಿರಾಸತ್ ನೃತ್ಯ-ಹಾಡುಗಳು ಮನಸೂರೆಗೊಂಡವು.ಹೊಸ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ ಮಾರ್ಪಟಾಗಿತ್ತು
ಕಾರಂತರಿಗೆ ವಿಶೇಷವಾಗಿ ಪ್ರತಿಭಾ ನಮನವನ್ನು ಆಯೋಜಿಸಲಾಗಿತ್ತು, ತನ್ನ ವಿಶೇಷ ಪ್ರತಿಭೆ ಮೂಲಕ ಸಾಧನೆ ಮಾಡಿದ ಕನ್ನಡದ ಕಣ್ಮಣಿ ವಿಜೇತೆ ಕುಮಾರಿ ಸಂಹಿತಾ,ವೇಗದ ಚಿತ್ರ ಕಲಾವಿದ ಪ್ರದೀಶ್ ಭಟ್,ಸೈಮಾ ಆವಾರ್ಡ್ ಪುರಸ್ಕೃತೆ ಕುಮಾರಿ ಶ್ಲಾಘ ಸಾಲಿಗ್ರಾಮ,ಬಾಲನಟಿ ಕುಮಾರಿ ವೈಷ್ಣವಿ ಅಡಿಗ,ಯಕ್ಷ ಕಲಾವಿದೆ ಕುಮಾರಿ ಧನ್ಯಶ್ರೀ ದೇವಾಡಿಗ,ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್,ಡ್ರಾಮಾ ಜ್ಯೂನಿಯರ್ ಖ್ಯಾತಿಯ ಕುಮಾರಿ ಸಿಂಚನಾ ಕೋಟೇಶ್ವರ,ಕನ್ನಡದ ಕಣ್ಮಣಿ ಕಲಾವಿದೆ ಸಮೃದ್ಧಿ ಕುಂದಾಪುರ,ರಾಷ್ಟ್ರೀಯ ಕ್ರೀಡಾಪಟು ಕುಮಾರಿ ಪ್ರಜ್ಞಾ ಗಾಣಿಗ,ರಾಷ್ಟ್ರ ಪ್ರಶಸ್ತಿ ವಿಜೇತ ಯುವ ವಾಗ್ಮಿ ಶ್ರೇಯಸ್ ಕೋಟ್ಯಾನ್,ಬಾಲನಟಿ ಧನ್ವಿ ಪೂಜಾರಿ ಮರವಂತೆ,ಬಾಲನಟಿ ಆನ್ಯ ಶೆಟ್ಟಿಯವರಿಂದ ಕಾರಂತಜ್ಜನಿಗೆ ಪ್ರತಿಭಾ ನಮನ ಸಲ್ಲಿಸಿದರು.
ರಾಜ್ ಕೊಠಾರಿ ಅವರ ಕೀಟ್ಲೆ ಕೃಷ್ಣ ಚಲನಚಿತ್ರ ಪ್ರದರ್ಶನವಾಯಿತು ಪ್ರಸ್ತುತ ಸಮಾಜದ ಮಕ್ಕಳ ಮನಸ್ಥಿತಿಯ ಬಗ್ಗೆ ಸುಂದರವಾಗಿ ಅರಿವು ಮೂಡಿಸುವ ಚಲನಚಿತ್ರವು ಎಲ್ಲಾ ಪೋಷಕರ ಜಾಗೃತಗೊಳಿಸಿತು,ಡಾ.ವೈದೇಹಿ ಅವರ ಕಾದಂಬರಿ ಆಧಾರಿತ ಅಮ್ಮಚ್ಚಿಯೆಂಬ ನೆನಪು ಎಂಬ ಚಲನಚಿತ್ರ ಪ್ರದರ್ಶನ ನಮ್ಮ ಹಿಂದಿನ ಕಾಲದ ಹಳ್ಳಿಯ ಸೊಗಡನ್ನು ಉಣ ಬಡಿಸಿತಲ್ಲದೇ,ಒಂದು ಹೆಣ್ಣಿನ ಭಾವನೆಗಳು,ಅವಳ ತ್ಯಾಗ ಎಲ್ಲವೂ ಕಣ್ಣೆದುರಿಗೆ ಕಟ್ಟಿ ಕೊಟ್ಟಿತು.ಇನ್ನು ಮಕ್ಕಳ ಹಬ್ಬ 10 ಸ್ಥಳೀಯ ಅಂಗನವಾಡಿ ಮುದ್ದು ಮಕ್ಕಳ ನೃತ್ಯ ವೈವಿಧ್ಯ ಎಲ್ಲರನ್ನು ರಂಜಿಸಿತು, ಜಯಂತ್ ಕಾಯ್ಕಿಣಿ ಬರುತ್ತಾರೆ ಎಂಬ ಸುದ್ದಿಗೆ ಯುವ ಮನಸ್ಸುಗಳು ಅವರ ಮಾತಿನ ಮೋಡಿ ಕೇಳಲು ತವಕದಲ್ಲಿ ಕಾಯುತ್ತಿದ್ದರು. ಸಿನಿಮಾ ಎಂಬ ಮಾಯೆ ಬಗ್ಗೆ ಒಂದು ಗಂಟೆಗಳ ಕಾಲ ಮಾತನಾಡಿ ನೆರೆದ ಎಲ್ಲರನ್ನು ಸಿನಿಮಾ ಲೋಕದ ಮಾಯೆಗೆ ಕರೆದೊಯ್ದರು, ನಂತರ ಕಾಯ್ಕಿಣಿ ಅವರ ಕುರಿತಾದ ಕಾಯ್ಕಿಣಿ ಕಥನ ಲೋಕಾರ್ಪಣೆಯಾಯಿತು,ಪ್ರಸಿದ್ದ ಯುವ ಗಾಯಕರಿಂದ ಜಯಂತ್ ಕಾಯ್ಕಿಣಿ ರಚಿಸಿದ ಹಾಡುಗಳ ಗಾನ ವೈಭವ ನಡೆಯಿತು. ಅವರ ಮುಂದೆಯೇ! ಅದು ಯುವ ಗಾಯಕರಿಗೆ ಒಂದು ಭಾಗ್ಯವೇ ಸರಿ, ಡಾ|| ಶಿವರಾಮ ಕಾರಂತರ ಕಾದಂಬರಿ ಆಧಾರಿತ ಬೆಟ್ಟದ ಜೀವ ಚಲನಚಿತ್ರ ಪ್ರದರ್ಶನದಲ್ಲಿ ಪ್ರಕೃತಿಯ ಸೊಬಗು,ಹಿರಿಯ ಜೀವಗಳ ತುಡಿತ ಕಾರಂತರ ಪರಿಸರದ ಬಗ್ಗೆ ಇದ್ದ ಕಾಳಜಿ ಕಾಣ ಸಿಕ್ಕವು,ಕಿರು ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳ ಪ್ರಯತ್ನದಲ್ಲಿ ಮೂಡಿ ಬಂದ ಕಿರು ಚಿತ್ರ ಪ್ರದರ್ಶನ ಯುವ ಪ್ರತಿಭೆಗಳ ಸೃಜನಾತ್ಮಕ ಕಿರು ಚಿತ್ರಗಳು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು ಯುವ ಪ್ರತಿಭೆಗಳನ್ನು ಪ್ರೇರೇಪಿಸುವಂತೆ ಇತ್ತು, ಕುಂದಾಪುರ ಭಾಗದ ಪ್ರಸಿದ್ದ ಹಾಸ್ಯ ಕಲಾವಿದ ನಟ ರಘು ಪಾಂಡೇಶ್ವರ್ ಸಾರಥ್ಯದ ಹಾಸ್ಯ ರಸಾಯನ ನಗುವಿನ ಹೊಟ್ಟೆ ತುಂಬಿಸಿತು,ಉದಯೋನ್ಮುಕ ಪ್ರತಿಭೆ ಶ್ರೀ ಸತೀಶ್ ಹೆಮ್ಮಾಡಿ ಇವರಿಂದ ಮೆಗಾ ಮ್ಯಾಜಿಕ್ ಪ್ರದರ್ಶನ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ ಎಲ್ಲರನ್ನು ಒಂದು ಕ್ಷಣ ಮಾಯಾ ಲೋಕಕ್ಕೆ ಕರೆದೊಯ್ದು ಹುಬ್ಬೇರಿಸುವಂತೆ ಮಾಡಿತು,ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುವ ತರಬೇತಿ ವಿಭಾಗಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಜಾತ್ರೆ ನಡೆಯಿತು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರದರ್ಶನ ಅಲ್ಲಿಯೇ ನೀಡುವ ಅವಕಾಶ ದೊರೆತದ್ದು ಒಂದು ಭಾಗ್ಯವೇ ಸರಿ,ಡಾ|| ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚೋಮನ ದುಡಿ ನಾಟಕ ಪ್ರದರ್ಶನವನ್ನು ಸುರಭಿ ಕಲಾ ತಂಡ ಬೈಂದೂರು ಇವರು ನಡೆಸಿಕೊಟ್ಟರು, ರಂಗ ವಿನ್ಯಾಸ,ಬೆಳಕಿನ ಚಮತ್ಕಾರ,ಅಭಿನಯ ಎಲ್ಲವೂ ರಂಗ ಪ್ರೇಮಿಗಳನ್ನು ಪುಳಕಿತಗೊಳಿಸಿತು.ಪ್ರತಿ ಸಂಜೆ ಮಳೆ ಹನಿಗಳು ತಂಪೆರಗಳು ಬರುತ್ತಿದ್ವು ಒಟ್ಟಿನಲ್ಲಿ ಸಾಂಸ್ಕೃತಿಕ ಮನಸ್ಸುಗಳಿಗೆ ಮಳೆಬಿಲ್ಲಿನ ಕನವರಿಕೆ ಜೊತೆಯಲ್ಲಿ ಸಂಜೆ ಸಾಂಸ್ಕೃತಿಕ ತಂಪು ನೀಡಿವೆ.
ಕಾರಂತೋತ್ಸವದಲ್ಲಿ ಈ ಸಲ ವಿಶೇಷವಾಗಿ ಚಿತ್ರಕಲಾ ಶಿಕ್ಷಕ ಶ್ರೀ ಗಿರೀಶ್ ವಕ್ವಾಡಿ ಅವರ ಸಾರಥ್ಯದಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು ಸುಮಾರು 200 ವಿದ್ಯಾರ್ಥಿಗಳು ರಚಿಸಿದ ವಿವಿಧ ಚಿತ್ರಗಳು ಕಲಾ ಕುಂಚದಲ್ಲಿ ಮೂಡಿಬಂದಿದ್ದು ಪ್ರವಾಸಿಗರನ್ನು,ಅತಿಥಿಗಳ ಕಣ್ಮನ ಸೆಳೆಯುತ್ತಿತ್ತು.
ಸರಿ ಸುಮಾರು 55 ಸಂಘ ಸಂಸ್ಥೆ ಒಳಗೊಂಡಂತೆ,275 ಅತಿಥಿಗಳು,ಒಟ್ಟು 3000 ಮಿಕ್ಕಿ ಪ್ರೇಕ್ಷಕರ ಅಪೂರ್ವ ಸಂಗಮ ಕಾರಂತೋತ್ಸವದಲ್ಲಿ ಈ ಸಲ ಜೊತೆಯಾಯಿತು.ಸಾಹಿತ್ಯ ಪ್ರೇಮಿಗಳಿಗೆ,ಕಾರಂತರ ಅಭಿಮಾನಿಗಳಿಗೆ ಹತ್ತು ದಿನಗಳ ಕಾಲ ಕನವರಿಸುವಂತೆ ಡಾ|| ಕಾರಂತ ಪ್ರತಿಷ್ಠಾನ(ರಿ)ಕೋಟ,ಕೋಟತಟ್ಟು ಗ್ರಾಮ ಪಂಚಾಯತ್,ಕಾರಂತ ಟ್ರಸ್ಟ್(ರಿ) ಉಡುಪಿ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಪ್ರತಿ ವರ್ಷವು ಹೀಗೆ ವಿಜೃಂಭಣೆಯಿಂದ ನಮ್ಮೂರ ಹೆಮ್ಮೆಯ ಕಾರಂತಜ್ಜನ ನೆನಪಿನ ಕಾರ್ಯಕ್ರಮ ನಡೆಯುತ್ತಿರಲಿ ಎನ್ನುವುದು ಕಾರಂತಾಭಿಮಾನಿಗಳ ಆಶಯವಾಗಿದೆ.

