ಮನದ ತುಡಿತಗಳ ದಾಖಲಿಕರಣವೇ ಸಾಹಿತ್ಯ- ಅಮಿತಾಂಜಲಿ ಕಿರಣ್
ಕೋಟ :ಮನದಲ್ಲಿ ಮೂಡುವ ನೂರಾರು ತುಡಿತಗಳ ದಾಖಲಿಕರಣವೇ ಸಾಹಿತ್ಯ, ಸಾಹಿತ್ಯದ ಕಡೆ ಒಲವು ಇರುವವರ ಬದುಕಿನ ಅಂಗವಾಗಿ ಪುಸ್ತಕಗಳಿರುತ್ತೆ, ನಾವು ರಚಿಸಿದ ಕವನ, ಕಥೆಗಳು ನಮ್ಮೊಳಗೆ ಉಳಿಯದೆ ಇಂತಹ ಸಾಹಿತ್ಯ ಸಮ್ಮೇಳನ ಅನಾವರಣಗೊಳಿಸಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷೆ ಅಮಿತಾಂಜಲಿ ಕಿರಣ್ ಹೇಳಿದರು.
ಕೋಟ ಕಾರಂತ ಥೀಂ ಪಾರ್ಕ್ನ ಹೊರಾಂಗಣದ ಸಂಗೀತ ಕಾರಂಜಿಯ ವೀಕ್ಷಣಾ ಗ್ಯಾಲರಿಯಲ್ಲಿ ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರಂತರ ೨೪ನೇ ಪುಣ್ಯ ಸ್ಮೃತಿ ದಿನಾಚರಣೆಯ ಅಂಗವಾಗಿ ಕೋಟದ ಕಾರಂತ ಥಿಂ ಪಾರ್ಕ್ನಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲೆಯ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಚಿನಂಪ-೨೦೨೧(ಕವಿತನದ ಹೂ ಕಂಪನ)ದಲ್ಲಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಹಾಗೂ ಉಪನ್ಯಾಸಕಿ ಅಂಬಲಪಾಡಿಯ ವಾಸಂತಿ ಮಾತನಾಡಿ ಎಲ್ಲದರಲ್ಲೂ ಶಕ್ತಿ ಅಡಗಿದೆ. ವೈಜ್ಞಾನಿಕ ಯುಗದಲ್ಲಿ ಅಗೋಚರ ಶಕ್ತಿಗಳಿಂದ ಕೂಡಿದ ಪ್ರಕೃತಿಯೊಂದಿಗೆ ನಾವು ಜೀವನ ನಡೆಸುತ್ತಾ ಇದ್ದೇವೆ ಎಂದರು.
ಇದೇ ಸಂದರ್ಭ ಗೋಪಾಲ ತ್ರಾಸಿ ಅವರ ಲಂಡನ್ ಟು ವ್ಯಾಟಿಕನ್ ಸಿಟಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪ್ರತಿಷ್ಠಾನದ ಅಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಶಿಕ್ಷಕ ಸತೀಶ್ ವಡ್ಡರ್ಸೆ, ಸುಬ್ರಾಯ ಆಚಾರ್, ಸುಮನ ಆರ್ ಹೇರ್ಳೆ, ಉಪನ್ಯಾಸಕ ಸಂಜೀವ, ಪ್ರಶಾಂತ್ ಉಪಸ್ಥಿತರಿದ್ದರು. ಇದೇ ಸಂದರ್ಭ ನೀಲಾವರ ಸುರೇಂದ್ರ ಅಡಿಗ,ಗೋಪಾಲ ತ್ರಾಸಿ ಮತ್ತು ಅಮಿತಾಂಜಲಿ ಕಿರಣ್ ಅವರನ್ನು ಗೌರವಿಸಲಾಯಿತು.