ಶಿಕ್ಷಣ ಕ್ಷೇತ್ರದ ಹೊಸ ಕ್ರಾಂತಿ ಶಿಕ್ಷಕ ಶ್ರೀಸುರೇಶ್ ಮರಕಾಲ ಸಾೖಬ್ರಕಟ್ಟೆ
ಲೇಖನ–ಪ್ರಶಾಂತ್ ಸೂರ್ಯ ಸಾೖಬ್ರಕಟ್ಟೆ
ಕೆಲವೊಂದು ವ್ಯಕ್ತಿಗಳು ತಾವು ಸಲ್ಲಿಸುವ ಕ್ಷೇತ್ರಗಳಲ್ಲಿ ತಾವು ಮಾದರಿಯಾಗಿ ಸಮಾಜದ ಮುಂದೆ ನಿಲ್ಲುತ್ತಾರೆ ಅಂತವರ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀಸುರೇಶ್ ಮರಕಾಲ ಅವರು ಒಬ್ಬರು. ಶಿಕ್ಷಣ ರಂಗದಲ್ಲಿ ಶಿಕ್ಷಕನಾಗಿ ಹೇಗೆ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಅವರಲ್ಲಿನ ಬಹುಮುಖ ಪ್ರತಿಭೆಗೆ ಅವಕಾಶ ನೀಡಿ ಅವರನ್ನು ಹೇಗೆ ಮುಖ್ಯ ವಾಹಿನಿಗೆ ತರಬಹುದು ಎನ್ನುವುದನ್ನು ನಿರೂಪಿಸಿ ಸಾರ್ಥಕತೆ ಕಂಡವರಲ್ಲಿ ಇವರೂ ಒಬ್ಬರು.
ಪಿ.ಯು.ಸಿಯಲ್ಲಿ ಫೈಲ್ ಆದರೂ ರಾಷ್ಟ್ರಕ್ಕೆ ಮಾದರಿ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾೖಬ್ರಕಟ್ಟೆ ಜಂಭೂರಿನ ಬಡ ಕುಟುಂಬದಲ್ಲಿ ಶ್ರೀ ಲಕ್ಷ್ಮಣ ಮರಕಾಲ ಹಾಗೂ ತುಂಗ ದಂಪತಿಗಳ ಮಗನಾಗಿ ಮಾರ್ಚ್ 3, 1979 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲಿ ಮುಗಿಸಿ, ಫ್ರೌಡಶಾಲಾ ಶಿಕ್ಷಣವನ್ನು ಉಜಿರೆಯಲ್ಲಿ ಮುಗಿಸಿದರು. ಮುಂದೆ ಪಿಯು.ಸಿ ಯಲ್ಲಿ ಅನುರ್ತೀಣರಾಗಿ ಕಲಿಕೆಯನ್ನು ಮೊಟಕುಗೊಳಿಸಿ ಮೂರು ವರ್ಷಗಳ ಕಾಲ ವಿವಿದ ದುಡಿಮೆಗಳಲ್ಲಿ ತೊಡಗಿಸಿಕೊಂಡು,
ಶಿಕ್ಷಣ ಬದುಕಿನ ಮೈಲಿಗಲ್ಲುಗಳಲ್ಲಿ ಒಂದು ಎಂದು ತಿಳಿದು ಪಿ.ಯು.ಸಿ ನ್ನು ಖಾಸಗಿಯಲ್ಲಿ ಬರೆದು ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದರು. ಪದವಿ ಶಿಕ್ಷಣಕ್ಕೆಂದು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಸೇರಿ ಮೂರನೇ ವರ್ಷದ ಪದವಿ ತರಗತಿ ಓದುತ್ತಿರುವಾಗ ಪೋಲಿಸ್ ಕಾನ್ಸ್ಟೇಬಲ್ ಉದ್ಯೋಗ ಪಡೆಯುವಲ್ಲಿ ಯಶಸ್ಸಾದರು. ಬೈಂದೂರು ಪೋಲಿಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿ, ನಂತರ ಪೋಲಿಸ್ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ಕಂಪೂಟ್ಯರ್ ಎಕ್ಸಪರ್ಟ್ ಹಾಗೂ ಗೂಗಲ್ ಅರ್ಥ್ ಸ್ಪೆಶಲಿಸ್ಟ್ ಆಗಿ ಒಟ್ಟು ಎಂಟು ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು.
ಕನಸುಗಳನ್ನು ಎಲ್ಲರೂ ಕಾಣುತ್ತಾರೆ ಆದರೆ ಕೆಲವೊಂದು ವ್ಯಕ್ತಿಗಳು ಮಾತ್ರ ಅದನ್ನು ನನಸು ಮಾಡಲು ತಮ್ಮ ಬೆಂಬಿಡದ ಪರಿಶ್ರಮದ ಮೂಲಕ ಸಾರ್ಥಕತೆ ಕಂಡುಕೊಳ್ಳತ್ತಾರೆ. ಅಂತವರ ಸಾಲಿನಲ್ಲಿ ಸುರೇಶ್ ಮರಕಾಲ ಅವರು ಒಬ್ಬರು. ಪೋಲಿಸ್ ಇಲಾಖೆಯಲ್ಲಿ ಸರಕಾರಿ ನೌಕರಿಯಲ್ಲಿದ್ದರು ಅವರು ಕನಸು ಕಂಡಿದ್ದು ಅವರನ್ನು ಸೆಳೆಯುತ್ತಿದದ್ದು ಮಾತ್ರ ಶಿಕ್ಷಕ ವೃತ್ತಿ. ಶಿಕ್ಷಕನಾಗಬೇಕು ಎನ್ನುವ ಆಸೆಯು ಹೆಮ್ಮರವಾಗಿ ಬಿ.ಎಡ್ ನಲ್ಲಿ ಪ್ರಥಮ ರ್ಯಾಂಕ್ ಪಡೆದು ಜೊತೆಗೆ ನಾಲ್ಕು ಚಿನ್ನದ ಪದಕ ಪಡೆದು ಸಾಧನೆಯ ಮೊದಲನೆಯ ಹೆಜ್ಜೆಯನ್ನಿಟ್ಟರು.
ಇದು ಧಾರವಾಡ ಕರ್ನಾಟಕ ಯುನಿರ್ವಟಿಸಿಯಲ್ಲಿ 69 ವರ್ಷಗಳ ಮರೆಯಲಾಗದ ದಾಖಲೆಯಾಗಿರುವುದು ಸುಳ್ಳಲ್ಲ. ಕನಸಿಗೆ ಜೀವ ತುಂಬುವ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು ಬಿ.ಎಡ್ನ ಈ ಸಾಧನೆಯ ಹಿಂದೆ ಸುರೇಶ ಮರಕಾಲ ಅವರಿಗೆ ಬಹುದೊಡ್ಡ ಆಸರೆಯ ನೆರಳಾಗಿ, ಪ್ರೇರಣೆ ರೂಪದಲ್ಲಿ ಪೋಷಿಸಿದವರು ಕುಂದಾಪುರದ ಭಂಡಾರ್ಕಾಸ್ ಕಾಲೇಜಿನ ಗ್ರಂಥಾಲಯದ ಮುಖ್ಯಸ್ಥರಾಗಿದ್ದ ಶ್ರೀ ಆನಂದ್ ಅವರು.. ಶಿಕ್ಷಕ ವೃತ್ತಿ ಅನ್ನು ಆರಂಭಿಸಿ ಹಂತ ಹಂತವಾಗಿ ತನ್ನನ್ನು ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ದಾಹ ತೀರಿಸಿ ಅಂದು ಪಿಯುಸಿ ಪೈಲ್ ಆದ ಹುಡುಗ ಇಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ.
ಶಿಕ್ಷಣ ರಂಗದಲ್ಲಿ ಹೊಸ ಹೆಜ್ಜೆ.
ಶಿಕ್ಷಕನಾದವನು ಕೇವಲ ಮಕ್ಕಳ ಪಾಠ ಪುಸ್ತಕದ ವಿಷಯವನ್ನು ಪ್ರವಚನ ಮಾಡದೇ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಆಸಕ್ತಿ ಇದೆಯೊ ಅದನ್ನು ಅವರ ಆಸಕ್ತಿಗೆ ಅನುಗುಣವಾಗಿ ನೀಡಿದಾಗ ಮಕ್ಕಳು ನಿಜವಾದ ಶಿಕ್ಷಣ ಪಡೆಯಲು ಸಾಧ್ಯ ಎನ್ನುವ ಸಿದ್ದಾಂತದ ಮೂಲಕ ಸುರೇಶ್ ಮರಕಾಲ
ಅವರು ಪಠ್ಯ ಪುಸ್ತಕದ ಜೊತೆಗೆ ವಿವಿಧ ಪ್ರಯೋಗಗಳನ್ನು ಮಕ್ಕಳ ಮುಂದಿಟ್ಟರು. ಶಿಕ್ಷಣದ ಜೊತೆಗೆ ಮಕ್ಕಳಿಗೆ ಮಕ್ಕಳ ಬೌದ್ದಿಕ ವಿಕಸನಕ್ಕೆ ಸಹಕಾರವಾಗಬಲ್ಲ ಶಾಡೋಪ್ಲೇ, ಕನ್ನಡಿ ಬರಹ, ಪಿಯಾನೋ ಕೀಬೋರ್ಡ್ ಕಲಿಕೆ, ನಾಟಕಾಭಿನಯ, ಥರ್ಮೋಫೋಮ್, ಪೇಪರ್ ಕ್ರಾಫ್ಟ್ ಕಾರ್ಯಾಗಾರ, ತೋಟಗಾರಿಕ ಶಿಕ್ಷಣ, ಪ್ಲಂಬಿoಗ್ ಶಿಕ್ಷಣ, ಚಿತ್ರಕಲೆ, ಗೋಡೆ ಪೈಂಟಿoಗ್ ಸಂಗೀತ ತರಬೇತಿಗಳನ್ನು ಶಿಕ್ಷಣದ ಜೊತೆ ಹೊಸ ಅಭಿರುಚಿಯನ್ನು ಧಾರೆ ಎರೆದರು.
ಸುರೇಶ್ ಮರಕಾಲ ಅವರು ಶ್ಯಾಡೋಪ್ಲೇ(ಕೈಬೆರಳ ನೆರಳಾಟ)ದಲ್ಲಿ ಪ್ರವೀಣರು
ಮಕ್ಕಳಿಗೆ ಇದರ ಬಗ್ಗೆ ತರಬೇತಿ ನೀಡಿ ಜೊತೆಗೆ ಕನ್ನಡಿ ಬರಹದಲ್ಲೂ ಇವರ ಕೈಚಳಕ ಅಮೋಘವಾದದ್ದು ಇದನ್ನು ಮಕ್ಕಳಿಗೆ ಕಲಿಸಿ 8 ರಿಂದ 10ತರಗತಿಯ ವಿದ್ಯಾರ್ಥಿಗಳು ಕನ್ನಡಿ ಬರಹ ಬರೆಯುತ್ತಾರೆ ಅದೂ ಸಂಪೂರ್ಣವಾಗಿ ತಲೆಕೆಳಗಾಗಿ ಅಲ್ಲದೇ ವಿಶೇಷ ಎನ್ನುವಂತೆ ನಾವು ನೇರವಾಗಿ ಬರೆಯುವ ವೇಗಕ್ಕಿಂತಲೂ. ಶಾಲೆಯಲ್ಲಿ ಇವರ ತರಬೇತಿಯಿಂದ ವಿದ್ಯಾರ್ಥಿಗಳಿಂದ ಶಾಲೆಯ ಕಂಪೌoಡ್, ಗೊಡೆಗಳು ಬಣ್ಣಗಳಿಂದ ಲಕ ಲಕ ಹೊಳೆಯುತ್ತಿದೆ.
ಮಕ್ಕಳಿಗೆ ವಿಶೇಷ ಕಂಪ್ಯೂಟರ್ ಶಿಕ್ಷಣವನ್ನು ಶಾಲೆಯಲ್ಲಿ ಇವರೇ ನೀಡುತ್ತಿದ್ದಾರೆ. ಇದಕ್ಕೆಲ್ಲ ಸಾಕ್ಷಿಯಾದದ್ದು ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸರಕಾರಿ ಫ್ರೌಡಶಾಲೆ ಬೆಸೂರು ಸೋಮವಾರಪೇಟೆ ತಾಲ್ಲೂಕು ಕೊಡುಗು ಜಿಲ್ಲೆ ಶಾಲೆ.
ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ
ಉತ್ತಮ ಸಾಹಿತಿಯೂ ಆಗಿರುವ ಇವರ ಅನೇಕ ಕಥೆ ಕವನ ಹಾಗೂ ಲೇಖನಗಳು ರಾಜ್ಯದ ದಿನ ಪತ್ರಿಕೆಗಳಾದ ವಿಜಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಹೊಸದಿಗಂತ, ವಿಜಯ ನೆಕ್ಸ್ಟ್ ಮೊದಲಾದವುಗಳಲ್ಲಿ ಪ್ರಕಟವಾಗಿದೆ. ವಿಜಯವಾಣಿಯ ಶನಿವಾರದ ಪುಟಾಣಿ ಮ್ಯಾಗಜೀನ್ ನಲ್ಲಿ ಇವರ ಪ್ರಾಣಿ ಸರಣಿಗಳು ಪ್ರಪಂಚದ ಲೇಖನ ರಾಜ್ಯಾದ್ಯಂತ ಹೆಗ್ಗಳಿಕೆ ಪಡೆದಿದೆ. ಮಕ್ಕಳಲ್ಲಿನ ಸಾಹಿತ್ಯಭಿರುಚಿ ಬೆಳೆಸುವ ಉದ್ದೇಶದಿಂದ “ಚಿಣ್ಣರ ಪಲ್ಲಕ್ಕಿ” ಎಂಬ ಗೋಡೆ ಪತ್ರಿಕೆಯನ್ನು ಆರಂಭಿಸಿದ್ದಾರೆ. ಮಕ್ಕಳ ಬರವಣಿಗೆ ಶಾಲೆಗೆ ಸೀಮಿತವಾಗದೇ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಶಾಲೆಗೆ ಒಂದು ಬ್ಲಾಗ್ ಪೇಜ್ ರಚಿಸಿದ್ದಾರೆ.
ನಾಟಕವನ್ನು ಮಕ್ಕಳಿಗೆ ನಿರ್ದೇಶನ ಮಾಡಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ ಸುರೇಶ್ ಅವರು. ವಿಜ್ಞಾನ ನಾಟಕದಲ್ಲಿ ಮತ್ತೆ ಅರಳಿತು ಕಾನನ ಎಂಬ ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿತ್ತು, ಬೇಟಿ ಬಚಾವೋ ಬೇಟಿ ಪಡಾವೋ ರಾಜ್ಯ ಮಟ್ಟಕೆ ಆಯ್ಕೆಯಾಗಿ ಬೆಂಗಳೂರು ಕಲಾಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.
ಇವರ ನಿರ್ದೇಶನದಲ್ಲಿ ಮೂಡಿ ಬಂದ “ವಿಶ್ವ ವಿಜೇತ ವಿವೇಕಾನಂದ” ಸರಕಾರಿ ಶಾಲೆಯಲ್ಲಿ ಒಂದು ನಾಟಕಕ್ಕೆ ಹದಿಮೂರು ರಂಗಮoದಿರಗಳನ್ನು ನಿರ್ಮಿಸಿ ಬಳಸಿಕೊಂಡಿದ್ದು ಇಡೀ ಕರ್ನಾಟಕ ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಮೊತ್ತ ಮೊದಲು.
2020 ನೇ ಸಾಲಿನಲ್ಲಿ ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಡಶಾಲೆ ಅಲ್ಬಾಡಿ–ಆರ್ಡಿಯ ಮಕ್ಕಳು ಪ್ರಧಾನ ಮಂತ್ರಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಎಂ.ಎಚ್.ಆರ್.ಡಿ, ಪರವಾಗಿ ರಚಿಸಿದ ಪ್ರೊಮೋ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು, ಒಬ್ಬಳು ವಿದ್ಯಾರ್ಥಿನಿ ಪರೀಕ್ಷಾ ಪೇ ಚರ್ಚಾದಲ್ಲೂ ಭಾಗವಹಿಸಿದ್ದಳು. ಈ ವರ್ಷ ಇಬ್ಬರು ವಿದ್ಯಾರ್ಥಿನಿಯರಾದ ಅನುಷ ಮತ್ತು ರಕ್ಷಿತ ನಾಯ್ಕ ಅವರು ಸಿಎಸ್ಐಆರ್ ರಾಷ್ಟ್ರಮಟ್ಟದ ಅನ್ವೇಷಣಾ ಸ್ಪರ್ಧೆಯಲ್ಲಿ ದೇಶದಿಂದ ಸಲ್ಲಿಕೆಯಾದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಇಡೀ ದೇಶದಿಂದ ಆಯ್ಕೆಯಾದ ಏಕೈಕ ಸರಕಾರಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಡಶಾಲೆ ಅಲ್ಬಾಡಿ–ಆರ್ಡಿ ಶಾಲೆ.
ಇವರು ಅನ್ವೇಷಿಸಿದ ಗ್ಯಾಸ್ ಸೇವಿಂಗ್ ಕಿಟ್ ಎಂಬ ಉಪಕರಣಕ್ಕೆ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ CSIR INNOVATION AWARD FOR SCHOOL CHILDREN-2021 ಸ್ಪರ್ಧೆಯಲ್ಲಿ ಪ್ರಶಸ್ತಿ ಭಾಜನವಾಗುವುದರಲ್ಲಿ ಸುರೇಶ್ ಅವರ ಹೆಚ್ಚಿನ ಪಾಲು ಇದ್ದೇ ಇದೆ.
ಹುಡುಕಿ ಬಂತು ಎರಡೆರಡು ಬಾರಿ ರಾಷ್ಟ್ರ ಪ್ರಶಸ್ತಿ
ಸದಾ ನಗು ಮುಖದೊಂದಿಗೆ, ವಿದ್ಯಾರ್ಥಿಗಳೊಂದಿಗೆ ಉತ್ತಮ ಭಾಂಧವ್ಯ ಸೃಷ್ಟಿಸಿಕೊಂಡು, ಮಕ್ಕಳಲ್ಲಿ ಮಕ್ಕಳಂತಿದ್ದು ಹಿರಿಯರೊಡನೆ ಸೌಮ್ಯ ಸ್ವಭಾವದೊಂದಿಗೆ ವ್ಯವಹರಿಸಿ ಎಲ್ಲರ ಪ್ರೀತಿ ಪಾತ್ರರಾಗಿ ಎಲ್ಲರ ಅಚ್ಚುಮೆಚ್ಚಿನ ಸುರೇಶ್ ಮಾಸ್ಟರ್ ಆಗಿ , ನಿಮ್ಮ ಸಾಧನೆಯನ್ನು ಪರಿಗಣಿಸಿ ದೆಹಲಿಯ MHRD 2010 ರಲ್ಲಿ ಪ್ರಧಾನ ಮಂತ್ರಿ ಪುರಸ್ಕಾರದೊಂದಿಗೆ ಸನ್ಮಾನಿಸಿರುವುದು ನಿಮ್ಮ ಬದುಕಿನ ಸಾರ್ಥಕ ಸನ್ನಿವೇಶಕೊಂದು ಕೈಗನ್ನಡಿಯೇ ಸರಿ.
ಅಲ್ಲದೇ 2019 ರಲ್ಲಿ ಶಿಕ್ಷಣ ರಂಗದ ಅತ್ಯುನ್ನತ ಗೌರವದಲ್ಲಿ ಒಂದಾದ ರಾಷ್ಟ್ರ ಪ್ರಶಸ್ತಿ ಕೂಡಾ ನಿಮ್ಮನ್ನರಸಿ ಬಂದು ನಿಮಗೆ ದೊರಕಿದ್ದು ನಿಮ್ಮ ಸಾಧನೆಯ ಹೆಜ್ಜೆಗೊಂದು ಸಲ್ಲಬೇಕಾದ ಗೌರವವೇ ಸರಿ.
ಬದುಕಿನ ಎಲ್ಲ ಏರಿಳಿತ ಅನುಭವಿಸಿ, ಸೋತವನು ಮುದೊಂದು ದಿನ ಗೆಲುವಿನ ಮೆಟ್ಟಿಲುಗಳನ್ನು ಹತ್ತಬಹುದು ಎನ್ನುವುದಕ್ಕೆ ನಿದರ್ಶನದಂತೆ ತಾವು ಬದುಕಿ ತೋರಿಸಿ ಯುವ ಪೀಳಿಗೆಗೆ ಆದರ್ಶದಂತಿರುವ ತಾವು ಮಡದಿ ಪ್ರತಿಮಾ ಹಾಗೂ ಮಕ್ಕಳಾದ ಅಕ್ಷೋಭ್ಯ ಮತ್ತು ಅಥರ್ವನ ಜೊತೆ ಬದುಕಿನ ಬಾಳ ಬಂಡಿ ಸಾಗಿಸುತ್ತಿರುವ ನಿಮ್ಮ ಬದುಕಿನಲ್ಲಿ ಸಾಧನೆ ಎಂಬುವುದಕ್ಕೆ ಹೊಸ ಅರ್ಥ ನೀಡಲಿ , ಇನ್ನಷ್ಟೂ ವಿದ್ಯಾರ್ಥಿಗಳ ಬಾಳನ್ನು ಬೆಳಗುವ ನಕ್ಷತ್ರ ನೀವಾಗಿ ಎಂದು ಈ ಮೂಲಕ ಹಾರೈಕೆ.
ಶಿಕ್ಷಕರ ಸಾಹಿತ್ಯ–ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷರಾಗಿ ಶ್ರೀ ಸುರೇಶ್ ಮರಕಾಲ ಸಾೖಬ್ರಕಟ್ಟೆ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ , ಡಾ|| ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆಯುವ ಉಡುಪಿ ಜಿಲ್ಲೆಯ ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಾವಿಕ-2021(ತೀರದ ಹೆಜ್ಜೆಯ ಸಾಲು) ಸಮ್ಮೇಳನಾಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀಸುರೇಶ್ ಮರಕಾಲ ಸಾೖಬ್ರಕಟ್ಟೆ ಅವರು ಆಯ್ಕೆ ಆಗಿದ್ದಾರೆ.
ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ಡಿಸೆಂಬರ್ 31 ರಂದು ಶಿಕ್ಷಕರ ಸಾಹಿತ್ಯ–ಸಾಂಸ್ಕೃತಿಕ ಸಮ್ಮೇಳನ ನಾವಿಕ-2021(ತೀರದ ಹೆಜ್ಜೆಯ ಸಾಲು) ಕಾರ್ಯಕ್ರಮ ನಡೆಯಲಿದ್ದು ಜಿಲ್ಲೆಯ ವಿವಿಧ ಶಿಕ್ಷಕರಿಂದ ಬಹುವಿಧ ಗೋಷ್ಠಿ, ದಿಕ್ಸೂಚಿ ಭಾಷಣ, ಭಾವಗಾನ, ಗೌರವ ಸಮರ್ಪಣೆ, ನಡೆಯಲಿದ್ದು ಶ್ರೀ ವಿಠ್ಠಲ್ ನಾಯಕ್ ಪುತ್ತೂರು ಇವರಿಂದ ಸಾಹಿತ್ಯದ ಆಸಕ್ತಿ, ಶ್ರೀ ಮನು ಹಂದಾಡಿಯವರಿoದ ಜೀವನದಲ್ಲಿ ಹಾಸ್ಯ, ಡಾ. ಅಶೋಕ್ ಕಾಮತ್ ಅವರಿಂದ ಹೊಸ ಶಿಕ್ಷಣ ನೀತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ
ಲೇಖನ–ಪ್ರಶಾಂತ್ ಸೂರ್ಯ ಸಾೖಬ್ರಕಟ್ಟೆ |