ನಾವಾಡುವ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು -ಶ್ರೀ ಪ್ರಶಾಂತ್ ಶೆಟ್ಟಿ ಕೋಟ
ಕೋಟ : ನಾವು ದಿನ ನಿತ್ಯ ಆಡುವ ಭಾಷೆಯ ಬಗ್ಗೆ ಕೀಳರಿಮೆ ತೋರದೆ, ಅವಕಾಶವಿದ್ದಾಗ ಹೆಚ್ಚಾಗಿ ಅದನ್ನೇ ಬಳಸಿದಾಗ ಆ ಭಾಷೆ ಬೆಳೆಯಲು ಸಾಧ್ಯ, ಕುಂದಾಪ್ರ ಕನ್ನಡ ನಮ್ಮ ಬದುಕಿನ ಭಾವನಾತ್ಮಕ ಕೊಂಡಿ ಅದನ್ನು ಇನ್ನಷ್ಟೂ ಪಸರಿಸುವ ಹೊಣಿಗಾರಿಕೆ ನಮ್ಮ ಮೇಲಿದೆ, ಮುಂದಿನ ದಿನಗಲ್ಲಿ ಕುಂದಾಪ್ರ ಕನ್ನಡಲ್ಲೂ ಹೆಚ್ಚೆಚ್ಚು ನಾಟಕಗಳು ಮೂಡಿ ಬರುವಂತಾಗಲಿ ಎಂದು ರಂಗಕರ್ಮಿ ಶ್ರೀ ಪ್ರಶಾಂತ್ ಶೆಟ್ಟಿ ಕೋಟ ಅವರು ಹೇಳಿದರು.
ಅವರು ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಕುಂದ ಕನ್ನಡ ಹರಿಕಾರ ದಿ, ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ದತ್ತಿ ಪುರಸ್ಕಾರ, ಯಕ್ಷ ನೃತ್ಯ ತರಬೇತಿ ಕಾರ್ಯಾಗಾರ ಸಮಾರೋಪ, ಕುಂದಾಪ್ರ ಕನ್ನಡ ಹರಟೆ ಸರಣಿ ಉದ್ಘಾಟನೆ, ನನ್ನ ಕಥೆ ನಿಮ್ಮ ಜೊತೆ ತಿಂಗಳ ಸುದಿನ ತಧಿಗಿಣ-2022(ಸಂಗಮದ ಸರಿಗಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಚೇತನ್ ನೈಲಾಡಿ ಅವರು ದಿ. ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಅವರು ಕುಂದಾಪ್ರ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿ ಅದನ್ನು ಬೆಳೆಸುವಲ್ಲಿ ಬಹಳಷ್ಟು ಶ್ರಮ ವಹಿಸಿದವರು, ಅವರ ಹಾದಿಯಲ್ಲಿ ಕುಂದಾಪ್ರ ಕನ್ನಡ ಇನ್ನಷ್ಟೂ ಸಮೃದ್ಧಿಯಾಗಿ ಬೆಳೆಸುವಲ್ಲಿ ಹೆಜ್ಜೆ ಇಡೋಣ ಎಂದರು.
ಈ ಸಂದರ್ಭದಲ್ಲಿ ಪಶು ವೈದ್ಯ, ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಡಾ. ಅರುಣ್ ಕುಮಾರ್ ಶೆಟ್ಟಿ, ಹಾಗೂ ಯಕ್ಷ ನೃತ್ಯ ತರಬೇತಿದಾರರಾದ ಕುಮಾರಿ ಸಂಗೀತ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಕ.ಸಾ.ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಶೆಟ್ಟಿ, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಶ್ರೀ ರಾಮಚಂದ್ರ ಐತಾಳ್, ಪಂಚಾಯತ್ ಉಪಾಧ್ಯಕ್ಷ ಶ್ರೀ ವಾಸು ಪೂಜಾರಿ, ಸ.ಹಿ.ಪ್ರಾ.ಶಾಲೆ ಸ್ಯಾಬ್ರಕಟ್ಟೆ ಶಿಕ್ಷಕ ಶ್ರೀ ಸುರೇಂದ್ರ ಕೋಟ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀನರೇಂದ್ರ ಕುಮಾರ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಶಿಕ್ಷಕ ಶ್ರೀ ಸತೀಶ್ ವಡ್ಡರ್ಸೆ ನಿರೂಪಿಸಿದರು