ನಾವಾಡುವ ಭಾಷೆ ಮೇಲಿನ ಪ್ರೀತಿ ನಮ್ಮನ್ನು ಬೆಳೆಸುತ್ತದೆ.-ಮನು ಹಂದಾಡಿ
ದಿ.ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಕುಂದಕನ್ನಡ ಶ್ರೀ ಪುರಸ್ಕಾರ ಸ್ವೀಕರಿಸಿ ಅಭಿಮತ
ಕೋಟ: ನಾವು ದಿನ ನಿತ್ಯ ಆಡುವ ಭಾಷೆಯನ್ನು ಗೌರವಿಸಿ ಪ್ರೀತಿಸುವುದರಿಂದ ನಾವು ತಾನಾಗಿಯೆ ಬೆಳೆಯುತ್ತೇವೆ ,ಭಾಷೆಯ ಬಗ್ಗೆ ಕೀಳರಿಮೆ ಬಿಟ್ಟು ಎಲ್ಲಾ ಕಡೆ ಬಳಿಸಿದಾಗ ಭಾಷೆಯ ಮೌಲ್ಯ ಹೆಚ್ಚುತ್ತದೆ. ಕುಂದಾಪುರ ಭಾಷೆ ಪುರಾತನ ಕಾಲದಿಂದಲೂ ರೂಢಿಯಲ್ಲಿದೆ ಎಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖವಿದ್ದು ಇದು ನಮ್ಮ ಭಾಷೆಯ ಹೆಮ್ಮೆ , ಹಿರಿಯರು -ಕುಂದಾಪುರ ಜನರು ಸಹಕರಿಸಿದಲ್ಲಿ ಕುಂದಾಪುರ ಭಾಷೆಯ ಅಕಾಡೆಮಿ ನಿರ್ಮಾಣ ಸಾಧ್ಯ ಎಂದು ಶ್ರೀ ಮನು ಹಂದಾಡಿ ಅವರು ತಿಳಿಸಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ|| ಕಾರಂತ ಟ್ರಸ್ಟ್(ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ದಿ.ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಕುಂದಕನ್ನಡ ಶ್ರೀ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತಾನಾಡುತ್ತಿದ್ದರು.
ನಿವೃತ್ತ ಅಧ್ಯಾಪಕ ಶ್ರೀ ರಾಮದೇವ ಐತಾಳ್ ಮಾತನಾಡಿ, ಸಾಮಾಜಿಕ ತಾಣವನ್ನು ಸಮರ್ಪಕವಾಗಿ ಬಳಸಿ ಕುಂದಕನ್ನಡದ ಕಂಪನ್ನು ಎಲ್ಲ ಕಡೆ ಪಸರಿಸಿದ ಮನು ಹಂದಾಡಿಯವರು ಈ ಪುರಸ್ಕಾರಕ್ಕೆ ಯೋಗ್ಯ ವ್ಯಕ್ತಿ ಅವರನ್ನು ಆಯ್ಕೆ ಮಾಡಿದ ಸಮಿತಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಜಿ.ಮೂರ್ತಿ, ಶ್ರೀಕ್ಷೇತ್ರ ಸಾಲಿಗ್ರಾಮದ ಧರ್ಮಾದರ್ಶಿಗಳಾದ ಶ್ರೀ ಅನಂತ ಪದ್ಮನಾಭ್ ಐತಾಳ್, ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ ಕಲ್ಪನಾ ಭಾಸ್ಕರ್, ಸುಬ್ರಹ್ಮಣ್ಯ ಶೆಟ್ಟಿ, ನಟ ರಘು ಪಾಂಡೇಶ್ವರ್, ಕಾರಂತ ಥೀಮ್ ಪಾರ್ಕ್ ಟ್ರಸ್ಟಿ ಸುಬ್ರಾಯ್ ಆಚಾರ್, ಶ್ರೀಮತಿ ಸುಶೀಲಾ ಸೋಮಶೇಖರ್, ದಿ.ಸುರೇಂದ್ರ ಶೆಟ್ಟಿ ಧರ್ಮಪತ್ನಿ ಶ್ರೀಮತಿ ಶೈಲಾ, ನಿವೃತ್ತ ಶಿಕ್ಷಕ ಮೋನಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸತೀಶ್ ವಡ್ಡರ್ಸೆ ನಿರೂಪಿಸಿ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ-ವಂದಿಸಿದರು.