ನೆನಪು ಮೂವೀಸ್ ಕೋಟ ಅವರ ಸುಗಂಧಿ ಚಲನಚಿತ್ರದ ಪೋಸ್ಟರ್ ಬಿಡುಗಡೆ
ಕೋಟ : ಕೋಟದಂತಹ ಗ್ರಾಮೀಣ ಪರಿಸರದಲ್ಲಿ ನೆನಪು ಮೂವೀಸ್ನಂತಹ ಸಂಸ್ಥೆ ಸ್ಥಾಪಿಸಿ ಆ ಮೂಲಕ ಕಲಾತ್ಮಕ ಚಲನಚಿತ್ರ ನಿರ್ಮಿಸಿದ ಸಾಧನೆ ಅನನ್ಯ. ಇದರ ಹಿನ್ನೆಲೆ ಶಕ್ತಿಯಾಗಿರುವ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಸಾಹಿತಿ ಶ್ರೀ ಎಮ್ ರಾಮದೇವ ಐತಾಳ್ ನುಡಿದರು.
ಅವರು ಕೋಟದ ಕಾರಂತ ಥೀಂ ಪಾರ್ಕ್ ನಲ್ಲಿ ನೆನಪು ಮೂವೀಸ್ ಕೋಟದ ಚೊಚ್ಚಲ ಕಾಣಿಕೆ ಸುಗಂಧಿ ಕನ್ನಡ ಚಲನಚಿತ್ರದ ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತರಾಷ್ಟ್ರೀಯ ಖ್ಯಾತ ನಿರ್ದೇಶಕರಾದ ಶ್ರೀ ಜಿ. ಮೂರ್ತಿ, ಇದೊಂದು ಐತಿಹಾಸಿಕ ದಾಖಲೆಯಾಗುವ ಚಲನಚಿತ್ರ, ಕಾರಂತರು ನಮ್ಮ ಜೊತೆ ಸದಾ ಇದ್ದಾರೆ ಎಂದು ಸಾರುವ ಚಲನಚಿತ್ರವಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಸಂಜೀವ ಸುವರ್ಣ, ವಿನಯ ಪ್ರಸಾದ್, ವೈಷ್ಣವಿ ಅಡಿಗ ಅಭಿನಯಿಸಿದ್ದು ಪಿ.ಕೆ.ದಾಸ್, ಪ್ರವೀಣ್ ಗೋಡ್ಖಿಂಡಿ, ಸಂಜೀವ ರೆಡ್ಡಿ, ಗೋಪಿ, ಜಾನ್ಸನ್, ಮೊದಲಾದವರು ದುಡಿದಿದ್ದು ಇದೊಂದು ಹೊಸ ಆಯಾಮ ಸೃಷ್ಠಿಸಲಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಶ್ರೀ ಕ್ಷೇತ್ರ ಸಾಲಿಗ್ರಾಮ ದೇವಸ್ಥಾನದ ಧರ್ಮದರ್ಶಿ ಶ್ರೀ ಅನಂತ ಪದ್ಮನಾಭ್ ಐತಾಳ್ ,ಮನು ಹಂದಾಡಿ, ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ ಕಲ್ಪನಾ ಭಾಸ್ಕರ್, ಸುಬ್ರಹ್ಮಣ್ಯ ಶೆಟ್ಟಿ, ನಟ ರಘು ಪಾಂಡೇಶ್ವರ್, ಕಾರಂತ ಥೀಮ್ ಪಾರ್ಕ್ ಟ್ರಸ್ಟಿ ಸುಬ್ರಾಯ್ ಆಚಾರ್, ಶ್ರೀಮತಿ ಸುಶೀಲಾ ಸೋಮಶೇಖರ್, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿರ್ಮಾಪಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ-ವಂದಿಸಿದರೆ ಸಹ-ನಿರ್ಮಾಪಕ ಸತೀಶ್ ವಡ್ಡರ್ಸೆ ನಿರೂಪಿಸಿದರು.