ಚಿಂತನೆ ಬೀಜ ಬಿತ್ತಿದ ಮಕ್ಕಳ ನಾಟಕೋತ್ಸವ
ಮನುಷ್ಯ ತನ್ನ ಬುದ್ಧಿ ಸಾಮರ್ಥ್ಯದಿಂದ ಎಲ್ಲಾ ಜೀವಿಗಳಿಗಿಂತನೂ ಈ ಭೂ ಮಂಡಲದಲ್ಲಿ ವಿಶಿಷ್ಟವಾಗಿ ನೆಲೆ ಕಂಡುಕೊಂಡ. ತನ್ನಲ್ಲಿರುವ ಕೌಶಲ್ಯದಿಂದ ಸ್ವಾರ್ಥಕ್ಕಾಗಿ ಈ ಭೂ ಮಂಡಲದಲ್ಲಿ ತಾನು ಪ್ರಕೃತಿಗೆ ನೀಡಿದ ಕೊಡುಗೆಗಿಂತ ಕೆಡುಕನ್ನೇ ಜಾಸ್ತಿ ಮಾಡುತ್ತಾ ಬಂದ. ಅತಿಯಾದ ದುರಾಸೆಗಳೇ ಒಂದು ದಿನ ಅವನ ಅವನತಿಗೆ ಕಟ್ಟಿಟ್ಟ ಬುತ್ತಿ. ಅವನು ತನ್ನಲ್ಲಿರುವ ಎಷ್ಟೇ ಬುದ್ದಿವಂತಿಕೆ ತೋರಿಸಿದರೂ ಅವನಿಗೆ ಮುಳ್ಳಾಗುವುದು ಅವನು ಮಾಡಿದ ಕರ್ಮದಿಂದ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ,ಡಾ||ಕಾರಂತ ಪ್ರತಿಷ್ಠಾನ(ರಿ)ಕೋಟ,ಉಸಿರು ಅಧ್ಯಯನ -ತರಬೇತಿ ಕೇಂದ್ರ ಕೋಟ,ಕೋಟತಟ್ಟು ಗ್ರಾಮ ಪಂಚಾಯತ್ ಸಾರಥ್ಯದಲ್ಲಿ ನಡೆದ ಮಕ್ಕಳ ನಾಟಕೋತ್ಸವ ಪರಿಷೆ-2020(ಬಣ್ಣಗಳ ದೀಪ) ಕಾರ್ಯಕ್ರಮ ಆಯೋಜಿಸಲಾಗಿತ್ತು.ಮನುಷ್ಯನಿಗೆ ಈ ಪ್ರಕೃತಿಯೇ ಸರ್ವಸ್ವ ಆದರೆ ಅದರ ಉಳಿವಿಗೆ ಅವನ ಕೊಡುಗೆ ಶೂನ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳ್ಳವರಿಗೆ ಇರುವ ಸ್ಥಾನ-ಮಾನ ಜನಸಾಮಾನ್ಯರಿಗೆ ಸಿಗಲ್ಲ,ಕೆಲವೊಂದು ಸಂದರ್ಭದಲ್ಲಿ ಅಂತವರು ಶೋಷಣೆಗೆ ಒಳಪಡುತ್ತಾರೆ ಅಲ್ಲದೇ ನ್ಯಾಯಾಂಗ ವ್ಯವಸ್ಥೆ ಕೂಡ ಅವರಿಗೆ ದನಿ ಯಾಗಲಾರದು ಎಂಬ ಅಂಶವನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ವ್ಯಕ್ತಪಡಿಸಿದರು.
ವಿವೇಕ ಬಾಲಕಿಯರ ಫ್ರೌಡಶಾಲೆಯ ವಿದ್ಯಾರ್ಥಿಗಳ ಮಕ್ಕಳ ನಾಟಕೋತ್ಸವದಲ್ಲಿ ಆಯ್ದುಕೊಂಡ ಈ ನಾಟಕವನ್ನು ನರೇಂದ್ರ ಕುಮಾರ್ ಕೋಟ ಅವರು ನಿರ್ದೇಶಿಸಿ, ರವಿಕಾರಂತ್ ಅವರ ಸಂಗೀತ ಸಂಯೋಜನೆಯೊಂದಿಗೆ,ಕಥಾ ನಿರೂಪಣೆಯನ್ನು ಅಲ್ತಾರು ನಾಗರಾಜ್ ನಿರ್ವಹಿಸಿದರೆ,ಸುಧಾ ಕದ್ರಿಕಟ್ಟು ಹಾಗೂ ಬಾಲಕೃಷ್ಣ ಕೊಡವೂರು ನೆರವು ನೀಡಿರುವ ನಾಟಕ ಸೀಡ್ ಬಾಲ್. ಗಿಡ-ಮರಗಳಿಂದ ಪ್ರತಿಯೊಂದು ಜೀವಿಗೂ ತುಂಬಾನೇ ಪ್ರಯೋಜನವಿದೆ.ಆದರೆ ಕಾಡುಗಳ ನಾಶವಾಗುತ್ತಿದೆ ವಿನಹಃ ಅದನ್ನು ಉಳಿಸಿ ಬೆಳೆಸುವ ಆಸಕ್ತಿ ಯಾರಲ್ಲೂ ಕಾಣುತ್ತಾ ಇಲ್ಲ ಹೀಗೆ ಮುಂದುವರೆದರೆ ಪ್ರಾಣಿ-ಪಕ್ಷಿ ಸಂಕುಲದ ಮೇಲೆ ಹೇಗೆ ಪರಿಣಾಮ ಬೀರಲಿದೆ.ಮರ ಗಿಡಗಳನ್ನು ಹೇಗೆ ಉಳಿಸಿ ಬೆಳೆಸಬಹುದೆಂದು ಶಾಲಾ ವಿದ್ಯಾರ್ಥಿಗಳು ಕಾಡಿನಲ್ಲಿ ಆಗುವ ವಿಷಯವನ್ನು ಆಧಾರವಾಗಿಟ್ಟುಕೊಂಡು ತುಂಬಾನೇ ಮನಮುಟ್ಟುವಂತೆ ಪ್ರಸ್ತುತ ಪಡಿಸಿದ್ದಾರೆ.

ಒಂದು ವಿಶಾಲವಾದ ಕಾಡಿನ ಸಮೂಹ ಅಲ್ಲಿ ಗರುಡ ಎಂಬುವುದು ಪಕ್ಷಿ ಸಮೂಹಕ್ಕೆ ರಾಜನಾಗಿ ಆಳುತ್ತಿದ್ದ ಸಮಯ ಒಂದು ದಿನ ಕಾಡಿನ ರಾಜನ ಜನುಮದಿನ ಅದಕ್ಕೆ ಸರ್ವ ಪಕ್ಷಿ ಸಂಕೂಲ ರಾಜನಿಗೆ ಬೆಲೆ ಬಾಳುವ ಉಡುಗೊರೆ ನೀಡಲು ತಿರ್ಮಾನಿಸಿದವು.ರಾಜನ ಜನುಮದಿನ ಸಣ್ಣ ಪುಟ್ಟ ಉಡುಗೊರೆ ನೀಡಲಾಗುತ್ತಾ ಎಲ್ಲರೂ ಬೆಲೆಬಾಳುವ ವಜ್ರ-ಚಿನ್ನದಂತಹ ಆಭರಣ ಇನ್ನಿತರ ವಸ್ತುಗಳನ್ನು ರಾಜನಿಗೆ ನೀಡಿ ಖುಷಿ ನೀಡಿದವು ಆದರೆ ಆ ಸಮೂಹದಲ್ಲಿ ಇರುವ ಒಂದು ಗಿಳಿ ತನ್ನ ಪ್ರೀತಿಯ ರಾಜನಿಗೆ ತಾನು ತಿಳಿದ ಹಾಗೆ ಬೆಲೆಬಾಳುವ ಸೀಡ್ ಬಾಲ್ ಉಂಡೆಯನ್ನು ಉಡುಗೊರೆಯಾಗಿ ನೀಡಿತು.ಈ ಉಡುಗೊರೆ ನೋಡಿ ರಾಜನು ಹಾಗೂ ಉಳಿದ ಪಕ್ಷಿ ಸಮೂಹ ಅಪಹಾಸ್ಯ ಮಾಡಿದವು.ಆವಾಗ ಗಿಳಿಗೆ ತುಂಬಾನೆ ನೋವು ಆಯಿತು,ಅದು ಅಲ್ಲಿಂದ ನಿರ್ಗಮಿಸಿತು……ಆದರೆ ಗಿಳಿಯು ಇದರಿಂದ ಕುಗ್ಗಲಿಲ್ಲ ತನ್ನ ಕಾಯಕ ಮುಂದುವರೆಸಿ ಇನ್ನಷ್ಟೂ ಖಾಲಿ ಜಾಗದಲ್ಲಿ ಸೀಡ್ ಬಾಲ್ ಬಿತ್ತನೆ ಮಾಡಿ ಮರ ಗಿಡಗಳು ಬೆಳೆಯುವುದಕ್ಕೆ ಕಾರಣವಾಯಿತು.ಒಂದು ದಿನ ಇದ್ದಕ್ಕಿದ್ದ ಹಾಗೆ ಬಲವಾದ ಬಿರುಗಾಳಿ ಪಕ್ಷಿಗಳು ವಾಸಿಸುತ್ತಿದ್ದ ಕಾಡಿಗೆ ಅಪ್ಪಳಿಸಿತು ಪಕ್ಷಿಗಳು ಭಯಭೀತರಾಗಿ ಅತ್ತಿಂದಿತ್ತ ಹಾರಿ ಜೀವ ಉಳಿಸಿಕೊಳ್ಳಲು ದೂರ ಹಾರುತ್ತಾ ಸಾಗುತ್ತವೆ ಆದರೆ ಹಾರಿದಷ್ಟು ದೂರ ವಿಶ್ರಾಂತಿ ಪಡೆದುಕೊಳ್ಳಲು ಮರದ ಆಶ್ರಯ ಸಿಗಲ್ಲ ಹೀಗೆ ತುಂಬಾ ದೂರ ಕ್ರಮಿಸಿದಾಗ ಹಚ್ಚ ಹಸಿರಾಗಿ ಬೆಳೆದು ನಿಂತ ಮರಗಳನ್ನು ನೋಡಿ ಇಡೀ ಪಕ್ಷಿ ಸಂಕುಲಕ್ಕೆ ತುಂಬಾನೇ ಖುಷಿಯಾಗುತ್ತದೆ ಅಲ್ಲದೇ ಅಲ್ಲಿಯೇ ವಿಶ್ರಾಂತಿ ಆಶ್ರಯ ಪಡೆದು ಜೀವ ಉಳಿಸಿಕೊಳ್ಳುತ್ತವೆ.ಈ ಮರಗಳನ್ನು ನಾವು ಅವಮಾನ ಮಾಡಿ ಕಳುಹಿಸಿದ ಗಿಳಿಯು ಸೀಡ್ ಬಾಲ್ ನಿಂದ ಬೆಳೆದ ಮರಗಳು ಎಂದು ತಿಳಿದು ರಾಜ ಗಿಡುಗನಿಗೆ ತುಂಬಾನೇ ಬೇಜಾರಾಯಿತು ಅಂದು ಗಿಳಿಗೆ ಮಾಡಿದ ಅವಮಾನ ನೆನಪಾಗಿ ತಪ್ಪಿನ ಅರಿವು ರಾಜ ಗರುಡನಿಗೆ ಆಯಿತು.ನಮ್ಮ ಬದುಕು ನಡೆಯಬೇಕಾಗಿರುವುದು ಪ್ರಕೃತಿಯ ನಡುವೆ ಅದು ಚೆನ್ನಾಗಿದ್ದರೆ ನಮ್ಮ ಬದುಕು ಇಲ್ಲದ್ದಿದ್ದರೆ ಎಲ್ಲವೂ ಶೂನ್ಯ.. ಆಭರಣದಂತಹ ಬೆಲೆ ಬಾಳುವ ವಸ್ತುಗಳು ನಮಗೆ ಶೃಂಗಾರಕ್ಕೆ ಉಪಯೋಗಕ್ಕೆ ಆಗುತ್ತದೆ ವಿನಹಃ ಬದುಕಿಗಲ್ಲ ಎನ್ನುವ ಸಾರಾಂಶವಿರುವ ನಾಟಕ ಪ್ರದರ್ಶಿಸಿ ವೀಕ್ಷಕರ ಮನ ಗೆದ್ದರು.
ಮುಂದಿನ ನಾಟಕದ ಸರದಿ ಶ್ರೀ ಆರ್.ವಿ.ಭಂಡಾರಿ ರಚಿಸಿರುವ,ಶ್ರೀ ರೋಹಿತ್ ಬೈಕಾಡಿ ನಿರ್ದೇಶನದ ದಿಮ್ಸಾಲ್ ನಾಟಕ ಶಾಲೆ ಬ್ರಹ್ಮಾವರ ಅವರು ನೆರವು ನೀಡಿರುವ ಚೇತನಾ ಫ್ರೌಡಶಾಲೆ ಹಂಗಾರಕಟ್ಟೆ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕದ ಹೆಸರು ಪ್ರೀತಿಯ ಕಾಳು.

ನಾಟಕದ ಹೆಸರೇ ಒಂದು ತರ ಆಕರ್ಷವಾಗಿತ್ತು.ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು, ನ್ಯಾಯಾಂಗ ವ್ಯವಸ್ಥೆಯ ದುರ್ಬಳಕೆ, ಎಲ್ಲವನ್ನು ಎಳೆಎಳೆಯಾಗಿ ನಮ್ಮ ಮುಂದಿಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದರು. ನಾಟಕದ ಹೆಸರೇ ಹೇಳುವಂತೆ ಒಂದು ಪಕ್ಷಿ ಹೇಗೋ ಪ್ರೀತಿಯ ಕಾಳು ಪಡೆದುಕೊಳ್ಳತ್ತದೆ.ಅದು ಬಾಯಲ್ಲಿ ಕಚ್ಚಿಕೊಂಡು ಹಾರುತ್ತಿರುವಾಗ ಬಾಯಿಂದ ತಪ್ಪಿ ಬಿದ್ದು ರಾಜನ ಆಸ್ಥಾನದ ಧಾನ್ಯ ಸಂಗ್ರಹದ ಮಧ್ಯ ಬಿಳುತ್ತದೆ.ಮುಂದೆ ಆ ಹಕ್ಕಿಯು ಅದನ್ನು ಕಳೆದುಕೊಂಡ ಸಂಕಟ,ಅದನ್ನು ಪುನಹಃ ಪಡೆಯಲು ನಡೆಸುವ ಹೋರಾಟ ಎಲ್ಲವನ್ನು ವಿದ್ಯಾರ್ಥಿಗಳು ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದರು.ಆ ಪಕ್ಷಿಯು ರಾಜನ ಆಸ್ಥಾನಕ್ಕೆ ಬಂದಾಗ ಜನಸಾಮಾನ್ಯರಿಗೆ ಪ್ರವೇಶವಿಲ್ಲ ಎಂದು ಒಳಗೆ ಪ್ರವೇಶ ನಿರಾಕರಣೆ ಅದೇ ಬೆಲೆ ಬಾಳುವ ವಜ್ರ ವೈಡೂರ್ಯ ಧರಿಸಿ ಕುದುರೆ ಸವಾರಿ ಮಾಡಿಕೊಂಡು ಬಂದಾಗ ರಾಜನೇ ಸ್ವಾಗತಿಸಿ ಸತ್ಕಾರ ಮಾಡುವ ಬಗೆ ಇಂದಿನ ಕಾಲ ಘಟ್ಟದಲ್ಲಿ ಹಣಕ್ಕೆ ಅಂತಸ್ತಿಗೆ ಇರುವ ಬೆಲೆ ಸಾಮಾನ್ಯ ಜನಸಾಮಾನ್ಯರಿಗೆ ಇಲ್ಲ ಎನ್ನುವ ತಾರ್ಕಿಕವಿರಬಹುದು.ನಂತರ ರಾಜನ ಬಳಿ ತನ್ನ ಪ್ರೀತಿಯ ಕಾಳು ನಿಮ್ಮಲ್ಲಿರುವುದು ಅದನ್ನು ಮರಳಿ ಹುಡುಕಿಸಿ ಕೊಡಿ ಎಂದು ಬೇಡಿದಾಗ ರಾಜನಿಗೆ ಅದು ದೊರಕಿಸಿ ಕೊಡಬೇಕು ಎನ್ನುವ ಅಭಿಲಾಷೆ ಇದ್ದರೂ ಮಂತ್ರಿಗಳು ಮಾಡುವ ನಾಟಕ ಆಡುವ ನಾಟಕ ಬೆಲೆ ಬಾಳುವ ವಸ್ತುಗಳು ರಾಜನಿಗೆ ಸೇರಬೇಕಾದದ್ದು ಅದು ಇಲ್ಲಿಯೇ ಇರುವುದು ಸೂಕ್ತ ಎಂದು ರಾಜನ ಮನ ಪರಿರ್ವಸುವುದು ಎಲ್ಲವೂ ಇಂದಿನ ನಮ್ಮ ಸಮಾಜದಲ್ಲಿ ಆಳುವವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ತೊಡಕುಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಒಟ್ಟಿನಲ್ಲಿ ಮಕ್ಕಳ ರಂಗ ಭೂಮಿ ಚಟುವಟಿಕೆಗಳು ಕ್ಷೀಣಿಸುತ್ತಿರುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿದ ಶಾಲೆಯ ಶಿಕ್ಷಕರು ಅದನ್ನು ಅಷ್ಟೇ ಸುಂದರವಾಗಿ ಅಭಿನಯಿಸಿದ ಎಲ್ಲ ವಿದ್ಯಾರ್ಥಿಗಳೂ ಪ್ರಶಂಸನೆಗೆ ಆರ್ಹರು.ಅಲ್ಲದೇ ಕಾರ್ಯಕ್ರಮ ಆಯೋಜಕರಿಗೂ ನಾವು ತಲೆ ಬಾಗಲೇ ಬೇಕು.ಮಕ್ಕಳ ರಂಗ ಭೂಮಿ ಪಯಣ ಇನ್ನಷ್ಟೂ ನಡೆದು ಉತ್ತಮ ರಂಗಭೂಮಿ ಕಲಾವಿದರಾಗಲಿ ಎಂಬುವುದು ನಮ್ಮ ಹಾರೈಕೆ…..
-ಪ್ರಶಾಂತ ಸೂರ್ಯ ಸಾಬ್ರಕಟ್ಟೆ

