ಮಕ್ಕಳ ವಿಕಸನಕ್ಕೆ ಮನೆಯಲ್ಲಿಯೇ ಬೇಸಿಗೆ ಶಿಬಿರ
ನರೇಂದ್ರ ಕುಮಾರ್ ಕೋಟ ತಂಡವರಿಂದ ವಿಶೇಷ ಪರಿಕಲ್ಪನೆ
ಕೊರೊನಾ ವೈರಸ್ ನಿಂದ ಭಾರತ ಸೇರಿದಂತೆ ಹಲವು ದೇಶಗಳು ಅತಂತ್ರ ಸ್ಥಿತಿಯಲ್ಲಿದೆ ಯಾವುದೇ ದೈನಂದಿನ ಚಟುವಟಿಕೆಗಳು ನಡೆಯದೇ ಸ್ತಬ್ಧವಾಗಿ ಎಲ್ಲವೂ ಸರಿಯಾಗಿ ಇದ್ದರೆ ಎಪ್ರಿಲ್ -ಮೇ ತಿಂಗಳ ಸಮಯದಲ್ಲಿ ಜಾತ್ರೆಗಳು ,ಮದುವೆ ಇನ್ನಿತರ ಸಭೆ ಸಮಾರಂಭಗಳು ನಡೆಯುತ್ತಿದ್ದವು.ಆದರೆ ಈ ಸಲ ಹಾಗಿಲ್ಲ ಮಕ್ಕಳು ರಜೆಯ ಮಜ ಅನುಭವಿಸಲು ಅಜ್ಜಿಯ ಮನೆಗೆ ಹೋಗಲು ಆಗುತ್ತಿಲ್ಲ ಬೇಸಿಗೆ ಶಿಬಿರದಂತಹ ಶಿಬಿರಗಳು ಎಲ್ಲಿಯೂ ಆಯೋಜನೆಗೊಳ್ಳತ್ತಿಲ್ಲ ಆದರೆ ಕೋಟದಲ್ಲಿ ಹಾಗೆ ಆಗಲಿಲ್ಲ ನರೇಂದ್ರ ಕುಮಾರ್ ಹಾಗೂ ಅವರ ತಂಡದವರಿಂದ ಮನೆಯಲ್ಲಿಯೇ ಕೂತು ಮಕ್ಕಳು ಶಿಬಿರದಲ್ಲಿ ಭಾಗವಹಿಸುವಂತೆ ಮಾಡುವ ವಿಶೇಷ ಪರಿಕಲ್ಪನೆಯತ್ತಾ ಹೆಜ್ಜೆಯಿಟ್ಟರು ಅದುವೇ ಅಭಿವ್ಯಕ್ತಿ-2020(ಕನಸುಗಳ ವಿನಿಮಯ).


ಕಳೆದ 19 ವರ್ಷಗಳಿಂದ ಬೇಸಿಗೆ ಶಿಬಿರ ಆಯೋಜಿಸಿಕೊಂಡು ಮಕ್ಕಳ ವಿಕಸನಕ್ಕೆ ಮುನ್ನುಡಿ ಬರೆಯುವ ಕೆಲಸ ನಡೆಯುತ್ತಿತ್ತು ಆದರೆ ಸರಕಾರದಿಂದ ಈ ಸಲ ಬೇಸಿಗೆ ಶಿಬಿರ ನಡೆಸಲು ಅನುಮತಿ ಇಲ್ಲದ ಕಾರಣ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿ ಮನೆಯಲ್ಲಿಯೇ ಕೂತು ಮಕ್ಕಳು ಸದಾ ಚಟುವಟಿಕೆಯಿಂದ ಇರುವ ಪ್ರಯತ್ನ ಇದಾಗಿದೆ.ಇದಕ್ಕೆ ಜೀವ ತುಂಬಿದವರು ಉಸಿರು ಕೋಟ,ಕಾರಂತ ಪ್ರತಿಷ್ಠಾನ(ರಿ)ಕೋಟ,ಗೀತಾನಂದ ಫೌಂಡೇಶನ್ ಕೋಟ,ನೆನಪು ಮೂವೀಸ್ ಕೋಟ,ಕೋಟತಟ್ಟು ಗ್ರಾಮ ಪಂಚಾಯತ್,ಯು-ಚಾನೆಲ್ ಅವರ ಸಹಭಾಗಿತ್ವದಲ್ಲಿ ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.ಆನಂದ್ ಸಿ ಕುಂದರ್,ರಘು ತಿಂಗಳಾಯ,ಡಾ.ಸೂರ್ಯನಾರಾಯಣ ಉಪಾಧ್ಯ,ಮಾಧವ ಪಾರಂಪಳ್ಳಿ,ಪ್ರಸಾದ್ ರಾವ್ ಈ ಕಾರ್ಯಕ್ರಮದ ಶಕ್ತಿಗಳು.ಸಂಪನ್ಮೂಲ ವ್ಯಕ್ತಿಗಳಾಗಿ ವೇಂಕಟೇಶ್ ಭಟ್ ,ರವಿ ಕಾರಂತ,ಸತೀಶ್ ವಡ್ಡರ್ಸೆ ,ರಾಮಚಂದ್ರ ಐತಾಳ್,ಕೆ.ಕೆ.ಶಿವರಾಮ್,ಮಂಜುನಾಥ ನ್ಯಾರಿ,ರಾಜಶೇಖರ್ ಕೋಟ,ಕುಮಾರ ಕಾಳಾವರ,ಗಿರೀಶ್ ವಕ್ವಾಡಿ,ರಾಘವೇಂದ್ರ ರಾಜ್,ಸುರೇಶ್ ಕಾರ್ಕಡ,ಅಲ್ತಾರು ನಾಗರಾಜ್,ಅಮೃತ ಉಪಾಧ್ಯ ಸಹಕರಿಸುತ್ತಿದ್ದಾರೆ.
ಹೇಗಿರುತ್ತೆ ಈ ಶಿಬಿರ
ಮೊಬೈಲ್ ಬಳಕೆ ಈಗ ಸರ್ವೆ ಸಾಮಾನ್ಯ ಚಿಕ್ಕ ಮಕ್ಕಳಿಂದ ಹಿರಿಯರ ತನಕ ಹೆಚ್ಚಾಗಿ ಬಳಕೆ ಮಾಡುತ್ತಾರೆ.ಇದನ್ನು ಮನದಲ್ಲಿಟ್ಟುಕೊಂಡು ವಾಟ್ಸ್ ಅಪ್ ಮೂಲಕ ಶಿಬಿರ ನಡೆಸಲು ಯೋಜನೆ ಹಾಕಿಕೊಳ್ಳಲಾಯಿತು.ಈ ಶಿಬಿರಕ್ಕೆ ಮಕ್ಕಳಿಗೆ ಉಚಿತ ಪ್ರವೇಶವಾಗಿದ್ದು ನೊಂದಾವಣಿ ಮಾಡಿದ ಮಕ್ಕಳಿಗೆ ಪ್ರತ್ಯೇಕ ವಾಟ್ಸ್ ಗ್ರೂಪ್ ರಚಿಸಿ ಅದಕ್ಕೆ ಮಕ್ಕಳನ್ನು ಸೇರಿಸಿ ಪ್ರತಿದಿನ ವಿವಿಧ ಟಾಸ್ಕ್ ನೀಡಲಾಗುತ್ತದೆ.ಬೆಳಿಗ್ಗೆ 10 ಗಂಟೆಗೆ ನೀಡಿದ ಟಾಸ್ಕ್ ನ್ನು ಸಂಜೆ 4 ಗಂಟೆ ಒಳಗೆ ಪೂರ್ಣಗೊಳಿಸಿ ಗ್ರೂಪ್ ಗೆ ಕಳುಹಿಸಬೇಕು ಇದರಲ್ಲಿ ಅತ್ಯುತ್ತಮ ಎನಿಸಿದ ಮೂರನ್ನು ಆಯ್ಕೆ ಮಾಡಲಾಗುತ್ತದೆ.ಹತ್ತು ದಿನ ಹೀಗೆ ನಡೆಯುತ್ತಿದ್ದು ಪ್ರತಿ ಟಾಸ್ಕ್ನಲ್ಲಿ ಭಾಗವಹಿಸಿದ ಮಕ್ಕಳಿಗೆ ಅಂಕ ನೀಡಲಾಗುತ್ತದೆ.ಕೊನೆಗೆ ಜಾಸ್ತಿ ಅಂಕ ಪಡೆದು ಜಯ ಗಳಿಸಿದ ಮಕ್ಕಳಿಗೆ ವಿಶೇಷ ಬಹುಮಾನ ನೀಡುವ ವ್ಯವಸ್ಥೆ ಮಾಡಲಾಗಿದೆ.ಅಲ್ಲದೇ ಪ್ರತಿದಿನ ಆಯ್ಕೆಯಾದ ಮಕ್ಕಳ ಪ್ರತಿಭೆಯನ್ನು ಯು-ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಮಕ್ಕಳು ಮೊಬೈಲ್ ಟಿ.ವಿ ನೋಡಿ ಸಮಯ ಹಾಳು ಮಾಡುವುದಕ್ಕಿಂತ ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ಲವಲವಿಕೆಯಲ್ಲಿ ತೊಡಗಿಸಿಕೊಂಡಾಗ ಮಕ್ಕಳ ವಿಕಸನಕ್ಕೆ ದಾರಿಯಾಗುತ್ತದೆ.ಮಕ್ಕಳನ್ನು ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವ ಮಕ್ಕಳ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಸಂಘಟಕರು ಪ್ರಶಂಸನೆಗೆ ಆರ್ಹರು.
ಕಳೆದ 19 ವರ್ಷಗಳಿಂದ ನಮ್ಮ ತಂಡದೊಂದಿಗೆ ಬೇಸಿಗೆ ಶಿಬಿರ ನಡೆಸಿಕೊಂಡು ಬರುತ್ತಿದ್ದು,ಈ ಸಲ ಲಾಕ್ಡೌನ್ ಸಮಸ್ಯೆಯಿಂದ ಶಿಬಿರ ನಡೆಸಲು ಸಾಧ್ಯವಾಗದೇ ಇರುವುದರಿಂದ ಮಕ್ಕಳು ಮನೆಯಲ್ಲೇ ಕೂತು ಶಿಬಿರದಲ್ಲಿ ಭಾಗವಹಿಸುವಂತೆ ಮಾಡಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.ಒಟ್ಟು ನಾಲ್ಕು ವಾಟ್ಸ್ ಅಪ್ ಗ್ರೂಪ್ ರಚಿಸಿ 130 ಮಕ್ಕಳು ಭಾಗವಹಿಸುತ್ತಿದ್ದಾರೆ.ಮಕ್ಕಳ ಉತ್ಸಾಹದಿಂದ ಭಾಗವಹಿಸುತ್ತಿರುವುದು ಖುಷಿ ನೀಡಿದೆ.
– ನರೇಂದ್ರ ಕುಮಾರ್ ಕೋಟ
ಶಿಬಿರದ ರೂವಾರಿ
ಪ್ರತಿ ವರ್ಷ ಕಾರಂತ ಥೀಮ್ ಪಾರ್ಕ್ ನಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗುತಿತ್ತು ನೂರಾರು ಮಕ್ಕಳು ಸಂಭ್ರಮದಿಂದ ಭಾಗವಹಿಸುತ್ತಿದ್ದರು,ಲಾಕ್ ಡೌನ್ ಇರುವುದರಿಂದ ಮಕ್ಕಳಿಗೆ ವಾಟ್ಸ್ ಅಪ್ ಮೂಲಕ ಟಾಸ್ಕ್ ನೀಡಲಾಗುತ್ತಿದ್ದು,ಮಕ್ಕಳು ಖುಷಿಯಿಂದ ಭಾಗವಹಿಸುತ್ತಿದ್ದಾರೆ,ಪೋಷಕರ ಸಹಕಾರ ನೀಡುತ್ತಿದ್ದು ಕಾರ್ಯಕ್ರಮ ಯಶಸ್ಸು ಕಂಡಿದೆ.
-ಪ್ರಶಾಂತ್ ಸೂರ್ಯ
ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್ ,ಕೋಟ

