ರಾಜ್ಯದ ಮೊದಲ ಆನ್ ಲೈನ್ ಸಾಹಿತ್ಯಕ -ಸಾಂಸ್ಕೃತಿಕ ಸಮ್ಮೇಳನ ಹಾಂಪರಿ-2020(ಬದಲಾವಣೆಯ ಕರೆಗಾಳಿ) ಅಧ್ಯಕ್ಷರಾಗಿ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಆಯ್ಕೆ

ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಇವರ ಸಹಯೋಗದಲ್ಲಿ ಡಾ|| ಶಿವರಾಮ ಕಾರಂತರ ಪುಣ್ಯತಿಥಿ ಅಂಗವಾಗಿ ರಾಜ್ಯದ ಮೊದಲ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಸಮ್ಮೇಳನ ಹಾಂಪರಿ-2020 (ಬದಲಾವಣೆಯ ಕರೆಗಾಳಿ ) ಸಮ್ಮೇಳನಾಧ್ಯಕ್ಷರಾಗಿ ಪ್ರಸಂಗಕರ್ತ, ಭಾಗವತ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನಾಧ್ಯಕ್ಷರ ಬಗ್ಗೆ
ಯಕ್ಷಸಾಹಿತ್ಯಕ್ಕೆ ವಿಶೇಷವಾದ ಗಟ್ಟಿತನವಿದೆ. ಪದ್ಯಗಳಲ್ಲಿರುವ ಸಾಹಿತ್ಯದ ಹಿರಿಮೆ ಅಗಾಧವಾದುದು. ಛಂದಸ್ಸುಗಳ ಲಾಲಿತ್ಯ, ಪದಗಳ ಹಿತ ಹಾಗೂ ಸೂಕ್ಷ್ಮ ಜೋಡಣೆ ಯಕ್ಷ ಸಾಹಿತ್ಯದಲ್ಲಿ ಗಮನಿಸಬಹುದು. ಗಾಯನಕ್ಕೆ ಮತ್ತು ನರ್ತನಕ್ಕೆ ಒಟ್ಟಾರೆ ವಸ್ತುವನ್ನು ಮನೋಜ್ಞಾವಾಗಿ ಅಭಿವ್ಯಕ್ತಿಸಲು ಯಕ್ಷಗಾನದಲ್ಲಿ ಪದ್ಯದ ಸ್ಥಾನ ಮಹತ್ವವಾದುದು. ಯಕ್ಷ ಸಾಹಿತ್ಯವನ್ನು ಅದೆಷ್ಟೋ ಪ್ರಸಂಗಕರ್ತರು ಸಂಪದ್ದರಿತಗೊಳಿಸಿದ್ದಾರೆ. ಪ್ರಸ್ತುತ ಯಕ್ಷಗಾನದಲ್ಲಿ ಸಂಪ್ರದಾಯದ ಚೌಕಟ್ಟಿನಲ್ಲಿ ಮೌಲಿಕ ಕಥಾವಸ್ತು , ಸಾಹಿತ್ಯವನ್ನು ನೀಡುತ್ತಿರುವ ಯಕ್ಷಸಾಹಿತಿ, ಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು .
ಕುಂದಾಪುರ ತಾಲೂಕು ಬೇಳೂರು ಗ್ರಾಮದ ಮೊಗೆಬೆಟ್ಟುವಿನಲ್ಲಿ 20-06-1983 ರಲ್ಲಿ ಹೆರಿಯ ನಾಯ್ಕ ಮತ್ತು ಗುಲಾಬಿಯವರ ಪುತ್ರನಾಗಿ ಜನಿಸಿದ ಇವರಿಗೆ ಕಲೆ ರಕ್ತಗತವಾಯಿತು. ಇವರ ತಂದೆಯಲ್ಲಿ ಅನೇಕರು ಯಕ್ಷಗಾನ ಅಭ್ಯಾಸಿಸಲು ಬರುತ್ತಿದ್ದರು. ಆ ಯಕ್ಷಗಾನೀಯ ವಾತಾವರಣದಲ್ಲಿದ್ದ ಇವರಿಗೆ ನಾವಡರ ಧ್ವನಿಸುರುಳಿ ಇನ್ನಷ್ಟು ಸೆಳೆತ ನೀಡಿತು. ತಂದೆಯವರಿಂದ ರಂಗ ಕ್ರಮ, ಪ್ರಸಂಗ ನಡೆ ಕೇಳುತ್ತಾ ಸಾಂಪ್ರಾದಾಯಿಕತೆ ಬಗ್ಗೆ ವಿಶೇಷ ಗೌರವ ಹೊಂದಿದ ಇವರಿಗೆ ತಂದೆಯೇ ಮೊದಲ ಗುರುವಾದರು.
ತಮ್ಮ 10 ನೇ ವಯಸ್ಸಿನಲ್ಲಿ ‘ಬಬ್ರುವಾಹನ ನಾಗಿ ರಂಗ ಪ್ರವೇಶ ಮಾಡಿದ ಇವರ ಮೊದಲ ಗುರು ತಂದೆಯವರು ಹಾಗೂ ಹಳ್ಳಾಡಿ ಸುಬ್ರಾಯ ಮಲ್ಯರು. 14 ನೇ ವಯಸ್ಸಿನಲ್ಲಿ ಯಕ್ಷಗಾನ ಆಡಿಯೋ ಹಾಸ್ಯಾಯಣ : ಕೋಳಿಪಡೆ ರಂಗ ರಚನೆ-‘ ಗಾನ ಸುಧಾ’ ‘ಲಹರಿ’ ಕಂಪನೆಗಳಲ್ಲಿ ಈ ಆಡಿಯೋಗಳು ಯಶಸ್ಸು ಕಂಡು ದಾಖಲೆಯ ಮಾರಾಟವಾದವು 1997-98 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ವಿದ್ಯಾ ರ್ಥಿಯಾಗಿ ಸೇರ್ಪಡೆಯಾದರು.ನೀಲಾವರ ಲಕ್ಷ್ಮೀ ನಾರಾಯಣ್ಯ, ಗೋಪರ್ಾಡಿ ವಿಠಲ ಪಾಟೀಲ್, ಬನ್ನಂಜೆ ಸಂಜೀವ ಸುವರ್ಣ, ದೇವದಾಸ ರಾವ್ , ಕೃಷ್ಣಮೂರ್ತಿ ಭಟ್ ಕೇಂದ್ರದಲ್ಲಿ ಇವರಿಗೆ ಗುರುಗಳಾಗಿದ್ದರು. ಕಂದಾವರ ರಘುರಾಮ ಶೆಟ್ಟರು ಪ್ರಸಂಗ ರಚನೆಯ ಮಾನಸಗುರು. ಸೀಮನ್ತೂರು ನಾರಾಯಣ ಶೆಟ್ಟರ ನೇರಶಿಷ್ಯ ಪ್ರಸಿದ್ಧ ಛಾಂದಸ ಗಣೇಶ ಕೊಲೆಕಾಡಿಯವರಲ್ಲಿ ಯಕ್ಷಗಾನ ಛಂದಸ್ಸು ಶಿಕ್ಷಣ ಪಡೆದರು. 2005 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಭಾಗವತಿಕೆ ಗುರುವಾಗಿ ಸೇರ್ಪಡೆಗೊಂಡರು. ಡಾ. ಶಿವರಾಮ ಕಾರಂತರ ಯಕ್ಷರಂಗ ಎಂಬ ಯಕ್ಷ-ನಾಟಕ ತಂಡದ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನ ಕಲಾವಿದನಾಗಿ ಮುಂಬೈ, ಕಲ್ಕತ್ತಾ, ಮದ್ರಾಸ್, ಸಿಕ್ಕಿಂ, ನಾಗ್ಪುರ, ಬಿಹಾರ್, ಗೋವಾ, ಒರಿಸ್ಸಾ, ರಾಜಸ್ಥಾನ್, ಗುಜರಾತ್, ಭುವನೇಶ್ವರ್, ಅಸ್ಸಾಂ, ಕೇರಳ, ತಮಿಳುನಾಡು,.. ಹೀಗೆ ಭಾರತದಾದ್ಯಂತ ಸಂಚರಿಸಿದರಲ್ಲದೇ ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಐಲ್ಯರ್ಾಂಡ್, ಸಿಂಗಾಪುರ್, ದುಬೈ, ಆಸ್ಟ್ರೇಲಿಯಾ ಹೀಗೆ ಮುಂತಾದ ವಿದೇಶಗಲಲ್ಲಿಯೂ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಭಾಗವತಿಕೆಯಲ್ಲಿ ಮಾತ್ರವಲ್ಲದೇ ಪುರುಷವೇಷಧಾರಿಯಾಗಿ, ಸ್ತ್ರೀವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಮಾತ್ರವಲ್ಲದೇ ತೆಂಕುತಿಟ್ಟುವಿನಲ್ಲಿಯೂ ವೇಷಧಾರಿಯಾಗಿ, ಭಾಗವತರಾಗಿ ಅನುಭವ ಹೊಂದಿದ್ದಾರೆ. ಸಾಲಿಗ್ರಾಮ,ಪೆರ್ಡೂರು , ಅಮೃತೇಶ್ವರಿ, ಹಟ್ಟಿಯಂಗಡಿ, ಗೋಳಿಗರಡಿ ಮೇಳಗಳಲ್ಲಿ ಅತಿಥಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಹದಿನೈದು ಯಕ್ಷಗಾನ ಸಂಘ-ಸಂಸ್ಥೆಗಳಲ್ಲಿ ಗುರು-ನಿರ್ದೇಶಕ ನಾಗಿ ಸೇವೆ ಸಲ್ಲಿಸಿದ ಇವರು ಮಂಗಳೂರು ಆಕಾಶವಾಣಿಯಲ್ಲಿ 50 ಕ್ಕೂ ಹೆಚ್ಚು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತಿಕೆ-ನಿರ್ದೇಶನ. 100 ಕ್ಕೂ ಹೆಚ್ಚು ಯಕ್ಷಗಾನ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿ ಭಾಗವಹಿಸುವಿಕೆ. 2010 ರಲ್ಲಿ ಯಕ್ಷಗಾನ ಅಕಾಡೆಮಿ ಪ್ರಕಟಿಸಿದ ಯಕ್ಷ ಕಲೋಪಾಸಕರು ಮಹಾಗ್ರಂಥದ ಲೇಖಕ. ಎರಡು ಎಂ.ಪಿ.ತ್ರಿ. ಭಕ್ತಿಗೀತೆ ರಚನೆ, ಕುಂದಾಪುರ ಕನ್ನಡದ ಪ್ರಪ್ರಥಮ ಪೌರಣಿಕ ಯಕ್ಷಕೃತಿ ನರಹರಿ ಹೊ-ಕೈ ರಚನೆ. ಸಾಮಾಜಿಕ , ಪೌರಣಿಕ ಕಾಲ್ಪನಿಕ, ಐತಿಹಾಸಿಕ, ಜಾನಪದಿಕ ಸೇರಿದಂತೆ – 28 ಯಕ್ಷಗಾನ ಪ್ರಸಂಗಗಳ ರಚನೆ. ಇತರ ಕಥೆಗಾರರ 18 ಪ್ರಸಂಗಗಳಿಗೆ ಪದ್ಯ ರಚನೆ ಮಾಡಿದ ಹೆಗ್ಗಳಿಕೆ.
ಪೇಜಾವರ ಶ್ರೀ, ಡಾ.ಡಿ.ವಿರೇಂದ್ರ ಹೆಗ್ಗಡೆ, ಕೆರೆಮನೆ ಶಂಭು ಹೆಗಡೆ, ಗಿರೀಶ್ ಕಾರ್ನಾಡ್ , ಕಿಚ್ಚ ಸುದೀಪ್ ಸೇರಿದಂತೆ ನಾಡಿನ ಗಣ್ಯರಿಂದ 300 ಕ್ಕೂ ಹೆಚ್ಚು ಸನ್ಮಾನ.
ಪ್ರಸಿದ್ಧಿ ತಂದ ಕೃತಿಗಳು
ಅಮರಾಮೃತ (100)
ಅಮೃತ ಘಳಿಗೆ (100)
ದುರ್ಗಾಷ್ಠಮಿ (100)
ಸಿಂಗಾರಪುಷ್ಪಾ
ಶೃಂಗಾರ ಕಾವ್ಯ
ಸ್ವಪ್ನ ಮಂಟಪ (50)
ಕೋಳಿಪಡೆ ರಂಗ (ಆಡಿಯೋ)
ಬ್ರಹ್ಮಾಕ್ಷರ (ಮಕ್ಕಳ ಪಂಚತಂತ್ರ ಕಥೆಗಳು)
ಮಹಾಶಕ್ತಿ ಗದ್ದುಗೆ ಅಮ್ಮ,
ಕಾಮನಬಿಲ್ಲು (50)
ನಕ್ಷತ್ರರಾಗಿಣಿ(100)
ನಾಟ್ಯವಲ್ಲಿ(ವಿಸಿಡಿ)
ವಡ್ಡರ್ಸೆ ವಸಯಂಧರೆ
ಪ್ರಚಂಡ ಪಂಜುರ್ಲಿ (100)
ಪಂಚದೈವಪ್ರತಾಪ(100)
ಹೀರೆಮಹಾಲಿಂಗೇಶ್ವರ ಮಹಾತ್ಮೆ
ಪಾವನ ಪಕ್ಷಿ
ಸರ್ಪ ಸುಪರ್ಣ
ವಿಕ್ರಮಶಿಲ್ಪಿ ವೀರ ಕಲ್ಕುಡ
ಗುರು ಶಿಷ್ಯರು
ಭಾಗ್ಯದ ಬಬ್ಬು ಸ್ವಾಮಿ
ಪದ್ಯ ರಚನೆಯ ಪ್ರಸಂಗಗಳು
ಚಿತ್ರಲೇಖಾ
ಸರ್ಪಸಂಸ್ಕಾರ
ಮೇಘಧಾರಿಣಿ
ಶಿವ ಶಾಂಭವಿ
ಗಂಧ ಚಂದನ
ನಾಗರ ಪಂಚಮಿ
ಪ್ರೇಮ ಸಾರಂಗ
ಗಂಡುಗಲಿ ದೇವರಾಯ
ಇಂದ್ರನಾಗ
ಪುಷ್ಪ ಸಿಂಧೂರಿ
ಪ್ರಶಸ್ತಿಗಳು
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಸ್ಕಂದ ಪ್ರಶಸ್ತಿ
ಕಾಳಿಂಗ ನಾವಡ ಪ್ರಶಸ್ತಿ
ಜಳವಳ್ಳಿ ಪ್ರಶಸ್ತಿ.

ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಡಿಸೆಂಬರ್ 6 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ನಡೆಯಲಿದ್ದುವಿಚಾರಗೋಷ್ಠಿ, ಪ್ರಬಂಧ ಮಂಡನೆ, ಕವಿಗೋಷ್ಠಿ, ನಾಟಕಾಂಶ ಪ್ರದರ್ಶನ, ಜನಪದ ಗುಂಜನ, ಕನ್ನಡ ಗೀತ ಗಾಯನ, ಯಕ್ಷನೃತ್ಯ, ಬಹುವಿಧ ಅಭಿವ್ಯಕ್ತಿ, ಏಕವ್ಯಕ್ತಿ ಸ್ವರಾಂಜಲಿ ಕಾರ್ಯಕ್ರಮಗಳು ನಡೆಯಲಿದೆ.
ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುವ ಕಾರ್ಯಕ್ರಮವನ್ನು ವೀಕ್ಷಿಸಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹಾಗೂ ಯೂಟ್ಯಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ

